ADVERTISEMENT

ನಟಿ ತುನಿಷಾ ಶರ್ಮಾ ಕುಟುಂಬದ ವಿರುದ್ಧ ಶೀಜನ್ ಕುಟುಂಬ ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 15:22 IST
Last Updated 2 ಜನವರಿ 2023, 15:22 IST
ತುನಿಷಾ ಶರ್ಮಾ
ತುನಿಷಾ ಶರ್ಮಾ   

ಮುಂಬೈ: ‘ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ನನ್ನ ಮಗಳಿಗೆ ಬಲವಂತ ಮಾಡಲಾಗುತ್ತಿತ್ತು ಹಾಗೂ ಹಿಜಾಬ್ ಧರಿಸುವಂತೆ ಒತ್ತಡ ಹೇರಲಾಗಿತ್ತು’ ಎಂದು ಕಿರುತೆರೆ ನಟಿ ತುನಿಷಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಅವರು ಮಾಡಿದ ಆರೋಪಕ್ಕೆ ಸಹನಟ ಶೀಜನ್ ಮೊಹಮ್ಮದ್ ಖಾನ್ ಅವರ ಕುಟುಂಬವು ಸೋಮವಾರ ಪ್ರತ್ಯಾರೋಪ ಮಾಡಿದೆ.

ಈ ಸಂಬಂಧ ಶೀಜನ್ ಖಾನ್ ಅವರ ತಾಯಿ, ಸಹೋದರಿಯರಾದ ಫಲಕ್‌ ನಾಜ್, ಶಫಕ್ ನಾಜ್ ಹಾಗೂ ಶೈಲೇಂದ್ರ ಮಿಶ್ರಾ ಅವರು ವನಿತಾ ಮಾಡಿದ ಆರೋಪಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಾರೋಪ ಮಾಡಿದ್ದಾರೆ.

‘ಶೀಜನ್ ವಿರುದ್ಧದ ಎಲ್ಲ ಆರೋಪಗಳನ್ನು ತುನಿಷಾ ಅವರ ಚಿಕ್ಕಪ್ಪ ಪವನ್ ಶರ್ಮಾ ಅವರೊಬ್ಬರೇ ಮಾಡಿದ್ದಾರೆ. ಚಿಕ್ಕಪ್ಪನ ಹಸ್ತಕ್ಷೇಪದ ಬಗ್ಗೆ ತುನಿಷಾ ರೋಸಿಹೋಗಿದ್ದರು’ ಎಂದೂ ಶೀಜನ್ ಕುಟುಂಬ ದೂರಿದೆ.

ADVERTISEMENT

‘ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹಿಜಾಬ್ ಧರಿಸಿರುವ ತುನಿಷಾ ಅವರ ಚಿತ್ರವು, ಶೂಟಿಂಗ್‌ವೊಂದಕ್ಕೆ ಸಂಬಂಧಪಟ್ಟಿದ್ದು. ಹಿಜಾಬ್, ದರ್ಗಾ, ಲವ್ ಜಿಹಾದ್ ಎನ್ನುವ ಆರೋಪಗಳೆಲ್ಲವೂ ಆಧಾರರಹಿತವಾದವು. ಯಾವುದೇ ಧರ್ಮವನ್ನು ಅನುಸರಿಸುವುದು ನಮ್ಮ ವೈಯಕ್ತಿಕ ಆಯ್ಕೆ. ನಾವು ಯಾರನ್ನೂ ಬಲವಂತ ಮಾಡಿಲ್ಲ. ಅದು ನಮ್ಮ ಹಕ್ಕೂ ಅಲ್ಲ. ಧರ್ಮದ ಹಿಂದೆ ಏಕೆ ಬಿದ್ದಿರುವಿರಿ? ನೀವು ಮಾನಸಿಕ ಅರೋಗ್ಯದ ಬಗ್ಗೆ ಮಾತನಾಡಬೇಕು. ನಿಮ್ಮ ಮಗಳು ಏಕೆ ಈ ನಿರ್ಧಾರಕ್ಕೆ ಬಂದಳು ಎಂಬುದನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ. ಆಗ ಜಗತ್ತಿನ ಸತ್ಯ ಏನೆಂಬುದು ತಿಳಿಯಲಿದೆ’ ಎಂದೂ ಕುಟುಂಬವು ಹೇಳಿದೆ.

ತುನಿಷಾಗೆ ಉರ್ದು ಭಾಷೆಯನ್ನು ಕಲಿಸಲಾಗುತ್ತಿತ್ತು ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ. ಆದ್ದರಿಂದ ಒಂದು ನಿರ್ದಿಷ್ಟ ಭಾಷೆ ಅಥವಾ ಧರ್ಮವನ್ನು ಒಪ್ಪಿಕೊಳ್ಳುವುದು ಏನನ್ನೂ ಸಾಬೀತುಪಡಿಸುವುದಿಲ್ಲ. ಇನ್ನು ಆಕೆಯನ್ನು ದರ್ಗಾಕ್ಕೆ ಕರೆದೊಯ್ಯಲಾಗಿತ್ತು ಎನ್ನುವ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ಸಾಬೀತುಪಡಿಸಲಿ. ತುನಿಷಾಳ ಕೆನ್ನೆಗೆ ಶೀಜನ್ ಹೊಡೆದಿದ್ದರು ಎನ್ನುವುದು ಅಪ್ಪಟ ಸುಳ್ಳು’ ಎಂದೂ ನಟನ ಕುಟುಂಬವು ಹೇಳಿದೆ.

ಜಾಮೀನು ಕೋರಿದ ಶೀಜನ್, ಜ. 7ಕ್ಕೆ ವಿಚಾರಣೆ

ಪಾಲ್ಘಾರ್: ತುನಿಷಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ನಟ ಶೀಜನ್ ಖಾನ್ ಅವರು ಸೋಮವಾರ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

‘ವಸಾಯಿ ಪಟ್ಟಣದ ಸೆಷೆನ್ಸ್ ನ್ಯಾಯಾಲಯದಲ್ಲಿ ಜ. 7ರಂದು ಜಾಮೀನು ಅರ್ಜಿಯು ವಿಚಾರಣೆಗೆ ಬರಲಿದೆ’ ಎಂದು ಖಾನ್ ಪರ ವಕೀಲ ಶರದ್ ರೈ ಹೇಳಿದ್ದಾರೆ.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಶೀಜನ್ ಖಾನ್ ಅವರನ್ನು ಥಾಣೆಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.