ADVERTISEMENT

ಪಂಜಾಬ್‌ ಪ್ರತಿಭಟನೆ: ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2021, 9:51 IST
Last Updated 15 ಜೂನ್ 2021, 9:51 IST
ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌–ಸಾಂದರ್ಭಿಕ ಚಿತ್ರ
ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಜಾಬ್‌ ಸರ್ಕಾರದ ವಿರುದ್ಧದ ಪ್ರತಿಭಟನೆಯ ವೇಳೆ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಅವರನ್ನು ಪಂಜಾಬ್‌ ಪೊಲೀಸರು ಬಂಧಿಸಿರುವುದಾಗಿ ಎಎನ್‌ಐ ಟ್ವೀಟಿಸಿದೆ.

ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ನಿವಾಸದ ಹೊರಗೆ ರಾಜ್ಯ ಸರ್ಕಾರದ ವಿರುದ್ಧ ಶಿರೋಮಣಿ ಅಕಾಲಿ ದಳದ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಪಂಜಾಬ್‌ನ ಆರೋಗ್ಯ ಸಚಿವ ಬಲ್ಬೀರ್‌ ಸಿಂಗ್‌ ಸಿಧು ಅವರನ್ನು ಸ್ಥಾನದಿಂದ ತೆಗೆದು ಹಾಕುವಂತೆ ಚಂಡೀಗಢದಲ್ಲಿ ಎಸ್‌ಎಡಿ ಪ್ರತಿಭಟನೆ ನಡೆಸುತ್ತಿದೆ. ಕೋವಿಡ್‌–19 ರೋಗಿಗಳಿಗೆ ನೀಡುವ ವೈದ್ಯಕೀಯ ಕಿಟ್‌ ಸಂಗ್ರಹ ಮತ್ತು ಲಸಿಕೆ ಮಾರಾಟದಲ್ಲಿ ಅವ್ಯವಹಾರ ನಡೆದಿರುವುದಾಗಿ ಎಸ್‌ಎಡಿ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಆರೋಪಿಸಿದ್ದು, ಆ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

ADVERTISEMENT

ಬಂಧನಕ್ಕೂ ಮುನ್ನ ಮಾತನಾಡಿದ ಸುಖಬೀರ್‌ ಸಿಂಗ್‌, 'ಬಿರುಗಾಳಿ ಎದ್ದರೆ, ತನ್ನೆಲ್ಲ ಪಡೆಯ ಬಲವನ್ನು ಬಳಸಿದರೂ ಅದನ್ನು ಕ್ಯಾಪ್ಟನ್‌ ತಡೆಯಲು ಸಾಧ್ಯವಾಗುವುದಿಲ್ಲ. ಲಸಿಕೆಯಲ್ಲಿ ಹಗರಣವಾಗಿದೆ, ಫತೇಹ್‌ ಕಿಟ್‌ನಲ್ಲಿ (ರೋಗಿಗಳಿಗೆ ನೀಡುವ ವೈದ್ಯಕೀಯ ಕಿಟ್) ಹಗರಣ, ಎಸ್ಸಿ ವಿದ್ಯಾರ್ಥಿ ವೇತನದಲ್ಲಿ ಹಗರಣ, ರೈತರ ಭೂಮಿಯನ್ನು ಅತಿಕ್ರಮಿಸಿಕೊಳ್ಳಲಾಗಿದೆ' ಎಂದು ಆರೋಪಿಸಿದ್ದಾರೆ.

ಬಿಎಸ್‌ಪಿಯ ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ಜಸ್ವೀರ್‌ ಸಿಂಗ್‌ ಗರ್ಹಿ ಬೃಹತ್‌ ಪ್ರತಿಭಟನೆಯಲ್ಲಿ ಭಾಗಿಯಾದರು. ಬಿಎಸ್‌ಬಿ ಮತ್ತು ಎಸ್‌ಎಡಿ ಇತ್ತೀಚೆಗಷ್ಟೇ ಮೈತ್ರಿ ಘೋಷಿಸಿಕೊಂಡಿದ್ದು, ಜೊತೆಯಾಗಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಎದುರಿಸಲಿವೆ.

ಮುಂದಿನ ವರ್ಷ ಪಂಜಾಬ್‌ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಾಗಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈತ್ರಿ ಮಾಡಿಕೊಂಡಿವೆ.ವಿಧಾನಸಭೆಯ 117 ಸ್ಥಾನಗಳ ಪೈಕಿ ಮಾಯಾವತಿ ನೇತೃತ್ವದ ಬಿಎಸ್‌ಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಸುಖ್‌ಬೀರ್‌ ಸಿಂಗ್‌ ಈಗಾಗಲೇ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.