ADVERTISEMENT

ಸರ್ವಾಧಿಕಾರಕ್ಕಿಂತ ವಂಶಾಡಳಿತ ಮೇಲು: ಭಾರತ ಒಗ್ಗೂಡಿಸಿ ಯಾತ್ರೆಗೆ ಸೇನಾ ಶ್ಲಾಘನೆ

ಭಾರತವನ್ನು ಒಗ್ಗೂಡಿಸಿ ಯಾತ್ರೆಗೆ ಶಿವಸೇನಾ ಶ್ಲಾಘನೆ l 100 ಕಿ.ಮೀ ಕ್ರಮಿಸಿದ ಯಾತ್ರೆ

ಪಿಟಿಐ
Published 13 ಸೆಪ್ಟೆಂಬರ್ 2022, 18:47 IST
Last Updated 13 ಸೆಪ್ಟೆಂಬರ್ 2022, 18:47 IST
ಪಾದಯಾತ್ರೆಯಲ್ಲಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರೊಂದಿಗೆ ಮಂಗಳವಾರ ಹೆಜ್ಜೆ ಹಾಕಿದರು–ಪಿಟಿಐ ಚಿತ್ರ
ಪಾದಯಾತ್ರೆಯಲ್ಲಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರೊಂದಿಗೆ ಮಂಗಳವಾರ ಹೆಜ್ಜೆ ಹಾಕಿದರು–ಪಿಟಿಐ ಚಿತ್ರ   

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತವನ್ನು ಒಗ್ಗೂಡಿಸಿ’ ಪಾದಯಾತ್ರೆಯನ್ನು ಶ್ಲಾಘಿಸಿರುವ ಶಿವಸೇನಾ, ದೇಶದಲ್ಲಿರುವ ನಿರಂಕುಶ ಆಡಳಿತಕ್ಕಿಂತ ವಂಶಾಡಳಿತವೇ ಮೇಲು ಎಂದು ಮಂಗಳವಾರ ಅಭಿಪ್ರಾಯಪಟ್ಟಿದೆ.

ಧರಿಸುವ ಬಟ್ಟೆ ವಿಚಾರದಲ್ಲಿ ರಾಹುಲ್ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಬದಲು, ಅವರು ಎತ್ತಿರುವ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆ ಸಲಹೆ ನೀಡಿದೆ. ರಾಹುಲ್ ಮುಂದಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಅವರು ಯಾವ ಬಟ್ಟೆ ಧರಿಸುತ್ತಾರೆ, ಏನು ತಿನ್ನುತ್ತಾರೆ ಎಂಬ ವಿಚಾರಗಳನ್ನು ಸೃಷ್ಟಿಸಿ ಅನಗತ್ಯವಾಗಿ ದಾಳಿ ಮಾಡುತ್ತಿದೆ’ ಎಂದು ಪತ್ರಿಕೆ ಆರೋಪಿಸಿದೆ. ರಾಹುಲ್ ಅವರು ದುಬಾರಿ ಟೀ–ಶರ್ಟ್ ಧರಿಸಿದ್ದಾರೆ ಎಂದು ಬಿಜೆಪಿ ಇತ್ತೀಚೆಗೆ ಆರೋಪಿಸಿತ್ತು.

‘ರಾಹುಲ್ ಎತ್ತಿರುವ ಎಲ್ಲ ಪ್ರಶ್ನೆಗಳೂ ಮೌಲ್ಯಯುತವಾಗಿದ್ದು, ಬಿಜೆಪಿಯ ಬಾಯಿ ಮುಚ್ಚಿಸಿವೆ. ನಿರುದ್ಯೋಗ, ರೈತರು, ಕಾರ್ಮಿಕರು ಹಾಗೂ ಸಣ್ಣ, ಮಧ್ಯಮ ಉದ್ಯಮಗಳ ಸಮಸ್ಯೆಗಳನ್ನು ಯಾತ್ರೆ ಪ್ರಸ್ತಾಪಿಸಿದೆ’ ಎಂದು ಸಾಮ್ನಾ ಉಲ್ಲೇಖಿಸಿದೆ.

ADVERTISEMENT

‘ಪಾದಯಾತ್ರೆಯು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಬಿಜೆಪಿಗೆ ಹೊಟ್ಟೆಯುರಿ ಬರುವಂತೆ ಮಾಡಿದೆ. ನಿರಂಕುಶಾಧಿಕಾರವು ದೇಶದಲ್ಲಿ ವಿನಾಶವನ್ನು ತರಲಿದ್ದು, ವಂಶಾಡಳಿತವೇ ಸದ್ಯಕ್ಕೆ ಸೂಕ್ತ. ರಾಹುಲ್ ನೇತೃತ್ವದ ಯಾತ್ರೆಯು ದೇಶದಲ್ಲಿ ಹರಡಿರುವ ದ್ವೇಷದ ವಾತಾವರಣವನ್ನು ಸರಿಪಡಿಸಲಿದೆ’ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.

ಯಾತ್ರೆಯಲ್ಲಿ ಮಕ್ಕಳ ಬಳಕೆ: ತನಿಖೆಗೆ ಸೂಚನೆ

ಭಾರತವನ್ನು ಒಗ್ಗೂಡಿಸಿ ಯಾತ್ರೆಯಲ್ಲಿ ಮಕ್ಕಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಜರುಗಿಸುವಂತೆ ಚುನಾವಣಾ ಆಯೋಗಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಸೂಚಿಸಿದೆ.

ಛತ್ತೀಸಗಡದಲ್ಲಿ ಯಾತ್ರೆಗೆ ಅವಕಾಶ ನೀಡದ ಕಾಂಗ್ರೆಸ್: ಸಿಪಿಐ

(ನವದೆಹಲಿ ವರದಿ): ಕಾಂಗ್ರೆಸ್ ಪಕ್ಷವು 3,500 ಸಾವಿರ ಕಿಲೋಮೀಟರ್‌ನಷ್ಟು ದೀರ್ಘವಾದ ಭಾರತವನ್ನು ಜೋಡಿಸಿ ಯಾತ್ರೆ ಕೈಗೊಂಡಿದೆ. ಆದರೆ ಅವರದೇ ಪಕ್ಷದ ಆಡಳಿತ ಇರುವ ಛತ್ತೀಸಗಡದಲ್ಲಿ ಬುಡಕಟ್ಟು ವಿಷಯ ಇಟ್ಟುಕೊಂಡು ಎಡಪಕ್ಷಗಳು ನಡೆಸಲು ಉದ್ದೇಶಿಸಿರುವ 100 ಕಿಲೋಮೀಟರ್ ಯಾತ್ರೆಗೆ ರಾಜ್ಯ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಸಿಪಿಐ ಆರೋಪಿಸಿದೆ.

ಸುಲ್ಜರ್‌ನಿಂದ ಸುಕ್ಮಾವರೆಗೆ ನಡೆಸಲು ಉದ್ದೇಶಿಸಿರುವ ಯಾತ್ರೆಗೆ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಟ್ವೀಟ್ ಮಾಡಿದ್ದಾರೆ.

ಮಳೆ ಲೆಕ್ಕಿಸದೇ ಮುನ್ನಡೆದ ಯಾತ್ರೆ

(ತಿರುವನಂತಪುರ ವರದಿ): ಸುರಿಯುತ್ತಿರುವ ಮಳೆಯ ನಡುವೆಯೇ ‘ಭಾರತ ಒಗ್ಗೂಡಿಸಿ’ ಯಾತ್ರೆಯು ಕೇರಳದಲ್ಲಿ ಮೂರನೇ ದಿನ ಪೂರೈಸಿದೆ. ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರು ಛತ್ರಿಯ ನೆರವು ಪಡೆಯದೇ, ತಿರುವನಂತಪುರ ಸಮೀಪದ ರಸ್ತೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ರಾಹುಲ್ ಗಾಂಧಿ ಹಾಗೂ ಪಾದಯಾತ್ರಿಗಳನ್ನು ಬೆಂಬಲಿಸುವ ಸಲುವಾಗಿ ಸಾವಿರಾರು ಜನರು ರಸ್ತೆಯ ಬದಿಯಲ್ಲಿ ಜಮಾಯಿಸಿದ್ದರು. ಕನಿಯಾಪುರಂ ಎಂಬ ಜಾಗದಿಂದ ಮಂಗಳವಾರ ಬೆಳಿಗ್ಗೆ 7.15ಕ್ಕೆ ಆರಂಭವಾದ ಯಾತ್ರೆ ಸಂಜೆ ಐದು ಗಂಟೆ ಹೊತ್ತಿಗೆ ಕಲ್ಲಂಬಾಲಂ ಎಂಬ ಜಾಗವನ್ನು ತಲುಪಿತು.

ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ದ್ವೇಷ, ಹಿಂಸೆಯಿಂದ ಚುನಾವಣೆಗಳನ್ನು ಗೆಲ್ಲಬಹುದೇ ಹೊರತು, ದೇಶ ಎದುರಿಸುತ್ತಿರುವ ಸಾಮಾಜಿಕ–ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲಾಗದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.