ADVERTISEMENT

ನಾನು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ: ಶಿವಸೇನಾ ನಾಯಕ ಸಂಜಯ್ ರಾವುತ್

ಪಿಟಿಐ
Published 31 ಜುಲೈ 2022, 16:06 IST
Last Updated 31 ಜುಲೈ 2022, 16:06 IST
ಸಂಜಯ್‌ ರಾವತ್‌
ಸಂಜಯ್‌ ರಾವತ್‌   

ಮುಂಬೈ: 'ನಾನುಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಜಾರಿ ನಿರ್ದೇಶನಾಲಯವು ನನ್ನ ವಿರುದ್ಧ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಿ ಕ್ರಮ ಕೈಗೊಂಡಿದೆ. ಸತ್ತರೂಶರಣಾಗುವುದಿಲ್ಲ. ಪಕ್ಷವನ್ನು ಬಿಟ್ಟುಹೋಗುವುದಿಲ್ಲ' ಎಂದು ಶಿವಸೇನಾ ನಾಯಕ ಸಂಜಯ್ ರಾವುತ್‌ ಹೇಳಿದ್ದಾರೆ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇ.ಡಿ) ಸಂಜಯ್‌ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಇದರ ಬೆನ್ನಲ್ಲೇ ಸಂಜಯ್‌ ಸರಣಿ ಟ್ವೀಟ್‌ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಶಿವಸೇನಾ ಮುಖ್ಯಸ್ಥ ಬಾಬಾ ಸಾಹೇಬ್‌ ಠಾಕ್ರೆ ಅವರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ನಾನುಈ ಮಾತನ್ನು ಹೇಳುತ್ತಿದ್ದೇನೆ. ಬಾಳಾ ಸಾಹೇಬರು ನಮಗೆ ಹೋರಾಡುವುದನ್ನು ಕಲಿಸಿದ್ದಾರೆ. ನಾನು ಶಿವಸೇನಾ ಪಕ್ಷಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ' ಎಂದು ತಿಳಿಸಿದ್ದಾರೆ.

ಇ.ಡಿ ವಶಕ್ಕೆ ರಾವುತ್‌
ಪತ್ರಾ ಚಾಲ್‌ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾವುತ್ ಅವರನ್ನು ಇ.ಡಿ ವಶಕ್ಕೆ ಪಡೆದಿದೆ. ಅವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಹಣವನ್ನು ವಶಪಡಿಸಿಕೊಂಡಿದೆ.

ಮೂಲಗಳ ಪ್ರಕಾರ ₹11.50 ಲಕ್ಷ ರೂಪಾಯಿ ಅಕ್ರಮ ನಗದು ಹಣವನ್ನು ಇ.ಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

₹1,034 ಕೋಟಿ ಮೊತ್ತದ ಪತ್ರಾ ಚಾಲ್‌ ಭೂ ಹಗರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಿಗ್ಗೆಯೇ ರಾವುತ್ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಹಲವು ಗಂಟೆಗಳ ಕಾಲ ಶೋಧ ನಡೆಸಿದ ಬಳಿಕ ರಾವುತ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ವಿಚಾರಣೆ ಮುಂದುವರೆದಿದೆ.

ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾದ ಪತ್ರಾ ಚಾಲ್‌ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾವುತ್ ಅವರಿಗೆ ಜುಲೈ 20 ಮತ್ತು 27 ರಂದು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ನೀಡಲಾಗಿತ್ತು.

ರಾಜ್ಯಸಭಾ ಸಂಸದರೂ ಆಗಿರುವ ರಾವುತ್‌ ಅವರು ಇ.ಡಿ ಸೂಚಿಸಿದ ದಿನಾಂಕದಂದು ಹಾಜರಾಗಲು ಸಾಧ್ಯವಿಲ್ಲ ಎಂದು ಅವರ (ಸಂಜಯ್‌ ರಾವುತ್) ಪರವಾಗಿ ವಕೀಲರು ಲಿಖಿತ ಉತ್ತರದಲ್ಲಿ ತಿಳಿಸಿದ್ದರು. ಇ.ಡಿ ಅಧಿಕಾರಿಗಳನ್ನು ಭೇಟಿಯಾದ ವಕೀಲರು ಈ ವಿಷಯ ತಿಳಿಸಿದ್ದು, ಆಗಸ್ಟ್ ಮೊದಲ ವಾರದ ಬಳಿಕ ಸಮಯ ನೀಡುವಂತೆ ವಿನಂತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.