ADVERTISEMENT

ಕೊರೊನಾ ವೈರಸ್‌ ಕೈಗೆ ಸಿಕ್ಕಿದ್ರೆ ಫಡಣವೀಸ್‌ ಬಾಯಿಗೆ ಹಾಕುತ್ತಿದ್ದೆ: ಗಾಯಕವಾಡ್

ಬಿಜೆಪಿ ಪ್ರತಿಣಟನೆಗೆ ಕಾರಣವಾದ ಶಿವಸೇನಾ ಶಾಸಕ ಹೇಳಿಕೆ

ಪಿಟಿಐ
Published 19 ಏಪ್ರಿಲ್ 2021, 8:07 IST
Last Updated 19 ಏಪ್ರಿಲ್ 2021, 8:07 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಬುಲ್ಟಾನಾ: ಕೊರೊನಾ ವೈರಸ್‌ ತಮ್ಮ ಕೈಗೇನಾದರೂ ಸಿಕ್ಕಿದ್ದಿದ್ದರೆ ಅದನ್ನು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಬಾಯಿಗೆ ಹಾಕುತ್ತಿದ್ದೆ ಎಂದು ಶಿವಸೇನಾ ಶಾಸಕ ಸಂಜಯ್‌ ಗಾಯಕವಾಡ್‌ ಹೇಳಿದ್ದಾರೆ. ರೆಮ್‌ಡಿಸಿವಿರ್‌ ಪೂರೈಕೆ ಬಗ್ಗೆ ಎರಡು ಪಕ್ಷಗಳ ನಡುವೆ ಜಟಾಪಟಿ ಜೋರಾಗಿರುವಾಗ ಸಂಜಯ್‌ ಶನಿವಾರ ನೀಡಿದ ಈ ಹೇಳಿಕೆ, ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷ ಬಿಜೆಪಿ ಪ್ರತಿಭಟನೆಗೆ ಕಾರಣವಾಗಿದೆ.

ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ದಾಸ್ತಾನಿಗೆ ಸಂಬಂಧಿಸಿ ಮುಂಬೈ ಪೊಲೀಸರು, ಫಾರ್ಮಾ ಕಂಪನಿಯೊಂದರ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ತನಿಖೆ ನಡೆಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿಯೂ ಆಗಿರುವ ಫಡಣವೀಸ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಅವರು ಆಡಳಿತಾರೂಢ ಮೈತ್ರಿ ಪಕ್ಷಗಳ ಟೀಕೆಗೆ ಆಹಾರವಾಗಿದ್ದರು. ಕೋವಿಡ್‌ –19 ಪ್ರಕರಣಗಳು ಒಂದೇ ಸಮನೇ ಏರುತ್ತಿರುವ ಕಾರಣ, ಇದರ ಚಿಕಿತ್ಸೆಗೆ ನೀಡಲಾಗುವ ರೆಮ್‌ಡಿಸಿವಿರ್‌ ಮದ್ದಿಗೆ ಬೇಡಿಕೆ ವಿಪರೀತವಾಗಿದೆ.

ಬುಲ್ಟಾನಾ ಶಾಸಕರೂ ಆಗಿರುವ ಗಾಯಕವಾಡ್‌ ವರದಿಗಾರರ ಜೊತೆ ಮಾತನಾಡಿ, ‘ಸಾಂಕ್ರಾಮಿಕ ಪಿಡುಗು ಜೋರಾಗಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದಿದ್ದರೆ ಫಡಣವೀಸ್‌ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ರಾಜ್ಯದ ಸಚಿವರ ಬೆಂಬಲಕ್ಕೆ ನಿಲ್ಲುವ ಬದಲು ಬಿಜೆಪಿ ನಾಯಕರು ಸರ್ಕಾರದ ಲೇವಡಿಯಲ್ಲಿ ತೊಡಗಿದ್ದಾರೆ. ಮೈತ್ರಿ (ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌) ಸರ್ಕಾರದ ವೈಫಲ್ಯವನ್ನು ಎದುರುನೋಡುತ್ತಿದ್ದಾರೆ ಎಂದಿದ್ದಾರೆ ಗಾಯಕವಾಡ್‌.

‘ಹೀಗಾಗಿ, ನನಗೇನಾದರೂ ವೈರಸ್‌ ಕೈಗೆ ಸಿಕ್ಕಿದಿದ್ದರೆ ಅದನ್ನು ಮೊದಲು ಫಡಣವೀಸ್‌ ಬಾಯಿಯೊಳಗೆ ಹಾಕಿಬಿಡುತ್ತಿದ್ದೆ’ ಎಂದು ಸಂಜಯ್‌ ಗಾಯಕವಾಡ್‌ ಹೇಳಿದ್ದಾರೆ.

ಪಿಡುಗಿನ ಮತ್ತು ರೆಮ್‌ಡಿಸಿವಿರ್‌ ಔಷಧ ವಿತರಣೆಗೆ ಸಂಬಂಧಿಸಿ, ಫಡಣವೀಸ್‌ ಮತ್ತು ಬಿಜೆಪಿಯ ಇತರ ನಾಯಕರಾದ ಪ್ರವೀಣ್ ದಾರೇಕರ್‌ ಮತ್ತು ಚಂದ್ರಕಾಂತ ಪಾಟೀಲ್‌ ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜಯ್‌ ಹೇಳಿಕೆ ಖಂಡಿಸಿರುವ ಬಿಜೆಪಿ ಕಾರ್ಯಕರ್ತರು ಬುಲ್ಟಾನಾ ನಗರದ ವಿವಿಧ ಕಡೆ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅವರ ಪ್ರತಿಕೃತಿ ಸುಟ್ಟುಹಾಕಿದ್ದಾರೆ.

‘ನಾನೇನೂ ತಪ್ಪು ಮಾಡಿಲ್ಲ. ತಮ್ಮ ವಿರುದ್ಧ ಯಾವುದೇ ತನಿಖೆ ನಡೆಸಿದರೆ ಬೆದರುವುದಿಲ್ಲ’ ಎಂದು ಫಡಣವೀಸ್‌ ಭಾನುವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.