
ಮುಂಬೈ: ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅವರನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ತಂತ್ರದ ಹಿಂದೆ ಬಿಜೆಪಿ ನಾಯಕತ್ವದ ಕೈವಾಡವಿದೆ ಎಂದು ಶಿವಸೇನಾ (ಉದ್ಧವ್ ಬಣ) ಸೋಮವಾರ ಆರೋಪಿಸಿದೆ.
ಬಿಜೆಪಿ ನಾಯಕತ್ವ ಮತ್ತು ಎನ್‌ಸಿಪಿ ನಾಯಕರಾದ ಸುನಿಲ್ ತಟಕರೆ ಪ್ರಫುಲ್ ಪಟೇಲ್ ಅವರಿಗೆ ಎನ್‌ಸಿಪಿ ಬಣಗಳ ವಿಲೀನ ಬೇಕಿಲ್ಲ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಆರೋಪಿಸಲಾಗಿದೆ. ಸುನೇತ್ರಾ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಸುಳಿವೇ ಇರಲಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.
‘ಸುನೇತ್ರಾ ಪವಾರ್ ಅವರ ಉಪಮುಖ್ಯಮಂತ್ರಿ ಹುದ್ದೆಯು ಆಲಂಕಾರಿಕವಾಗಬಾರದು. ಅವರು ಮೂಕ ಬೊಂಬೆಯಾಗಿರದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದೆ.
ಸನಾತನ ಮನಃಸ್ಥಿತಿಯ ಬಿಜೆಪಿ ಜೊತೆಗಿನ ಎನ್‌ಸಿಪಿ ಮೈತ್ರಿ ಮತ್ತು ಅಜಿತ್ ಪವಾರ್ ಅವರ ನಿಧದ ನಂತರದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸದೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಹಿಂದುತ್ವದ ನಂಬಿಕೆಗಳಿಗೆ ಸರಿಹೊಂದುವುದಿಲ್ಲ ಎಂದೂ ಅದು ಟೀಕಿಸಿದೆ.