ADVERTISEMENT

ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸಲು ಮನವಿ

ಪಿಟಿಐ
Published 26 ನವೆಂಬರ್ 2022, 11:32 IST
Last Updated 26 ನವೆಂಬರ್ 2022, 11:32 IST
   

ನವದೆಹಲಿ: ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣವನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಬೇಕೆಂದು ಕೋರಿ ಸೋಮವಾರ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದಾಖಲಿಸಲಾಗಿದೆ.

‘ಹತ್ಯೆ ನಡೆದ ಸ್ಥಳಗಳಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳ ಉಪಸ್ಥಿತಿಯಿಂದಾಗಿ ಸಾಕ್ಷ್ಯಗಳು ನಾಶವಾಗುವ ಸಂಭವ ಇದೆ’ ಎಂದೂ ಅರ್ಜಿದಾರರಾದ ಜೋಷಿನಿ ತುಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಅರ್ಜಿಯು ಬುಧವಾರ ವಿಚಾರಣೆಯ ಪಟ್ಟಿಗೆ ಬರುವ ಸಾಧ್ಯತೆ ಇದೆ. ‘ಇಂಥ ಪ್ರಕರಣಗಳಲ್ಲಿ ಕಾನೂನಿನ ಸಮ್ಮತಿ ಇಲ್ಲದೇ ಯಾವುದೇ ವಿವರವನ್ನೂ ಬಹಿರಂಗಪಡಿಸಬಾರದು. ಆದರೆ, ದೆಹಲಿ ಪೊಲೀಸರು ಇದುವರೆಗೆ ಪ್ರತಿಯೊಂದು ವಿವರವನ್ನೂ ಮಾಧ್ಯಮಗಳು ಮತ್ತು ಜನರಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಅಪರಾಧ ನಡೆದ ಸ್ಥಳವನ್ನೂ ಪೊಲೀಸರು ನಿರ್ಬಂಧಿಸಿಲ್ಲ’ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

ADVERTISEMENT

ಮಂಪರು ಪರೀಕ್ಷೆಗೂ ಮುನ್ನ ಸುಳ್ಳುಪತ್ತೆ ಪರೀಕ್ಷೆ:ಶ್ರದ್ಧಾ ಹತ್ಯೆ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾಗೆ ಸೋಮವಾರ ಮಂಪರು ಪರೀಕ್ಷೆ ನಡೆಸಲಾಗಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ಸಹಾಯಕ ನಿರ್ದೇಶಕ ಸಂಜೀವ್ ಗುಪ್ತಾ ತಿಳಿಸಿದ್ದಾರೆ.

ಮಂಪರು ಪರೀಕ್ಷೆಗೂ ಮುನ್ನ ಸುಳ್ಳುಪತ್ತೆ ಪರೀಕ್ಷೆ ನಡೆಸಬೇಕಿದೆ. ಆದರೆ, ಇದಕ್ಕೆ ಆರೋಪಿಯ ಒಪ್ಪಿಗೆಯ ಅಗತ್ಯವಿದೆ. ಒಪ್ಪಿದರೆ ಮಾತ್ರ ಸುಳ್ಳುಪತ್ತೆ ಪರೀಕ್ಷೆ ನಡೆಸಲಾಗುವುದು. ಇದಕ್ಕೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು. ಇವೆಲ್ಲ ಆದ ಬಳಿಕವಷ್ಟೇ ಮಂಪರು ಪರೀಕ್ಷೆ ನಡೆಸಲು ಸಾಧ್ಯ. 10 ದಿನಗಳೊಳಗೆ ಈ ಪರೀಕ್ಷೆ ನಡೆಸುವ ಸಾಧ್ಯತೆ ಇದೆ’ ಎಂದು ಎಫ್‌ಎಸ್‌ಎಲ್‌ನ ಮತ್ತೊಬ್ಬ ನಿರ್ದೇಶಕ ಪುನೀತ್ ಪುರಿ ಹೇಳಿದ್ದಾರೆ.

ಆಫ್ತಾಬ್‌ನ ಕಸ್ಟಡಿ ಅವಧಿಯು ಮಂಗಳವಾರ ಮುಕ್ತಾಯವಾಗಲಿದ್ದು, ದೆಹಲಿ ಪೊಲೀಸರು ಸುಳ್ಳುಪತ್ತೆ ಪರೀಕ್ಷೆಗೆ ಅನುಮತಿ ಕೋರಿ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಇದುವರೆಗೆ 11 ಜನರ ಹೇಳಿಕೆ ದಾಖಲು:ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡವು ಇದುವರೆಗೆ ಒಟ್ಟು 11 ಜನರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಇದರಲ್ಲಿ ಆಫ್ತಾಬ್ ತನ್ನನ್ನು ಹೊಡೆದಿದ್ದಾನೆ ಎಂದು ಶ್ರದ್ಧಾ ಮೆಸೇಜ್ ಮಾಡಿದ್ದ ಆಕೆಯ ಇಬ್ಬರು ಸ್ನೇಹಿತರೂ ಇದ್ದಾರೆ.

ಶ್ರದ್ಧಾಳ ತಂದೆ, ಆಕೆ ಮತ್ತು ಆಫ್ತಾಬ್ ವಾಸವಿದ್ದ ಮನೆಗಳ ಮಾಲೀಕರು,ಕಾಲ್‌ಸೆಂಟರ್‌ನ ಮಾಜಿ ವ್ಯವಸ್ಥಾಪಕ ಸೇರಿದಂತೆ ಒಟ್ಟು 11 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

37 ಬಾಕ್ಸ್‌ಗಳ ಸಮೇತ ದೆಹಲಿಗೆ ಬಂದಿದ್ದ ಆಫ್ತಾಬ್
ಮುಂಬೈ:
‘ಮೇ ತಿಂಗಳಲ್ಲಿ ಶ್ರದ್ಧಾ ಹತ್ಯೆ ನಡೆದ ಬಳಿಕ ಆಫ್ತಾಬ್ ಕೆಲ ವಸ್ತುಗಳನ್ನು 37 ಬಾಕ್ಸ್‌ಗಳಲ್ಲಿಟ್ಟುಕೊಂಡು ಜೂನ್‌ನಲ್ಲಿ ಮಹಾರಾಷ್ಟ್ರದ ಪಾಲ್ಘರ್‌ನಿಂದ ದೆಹಲಿಯ ತನ್ನ ಫ್ಲ್ಯಾಟ್‌ಗೆ ಬಂದಿದ್ದ. ಬಾಕ್ಸ್‌ಗಳ ಸ್ಥಳಾಂತರಕ್ಕಾಗಿ ಆತ ₹ 20 ಸಾವಿರ ಪಾವತಿಸಿದ್ದ’ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.

ಮನೆಯ ಸಾಮಾನುಗಳನ್ನು ಸ್ಥಳಾಂತರಿಸಲು ಇಬ್ಬರಲ್ಲಿ ಯಾರು ಹಣ ಪಾವತಿಸಬೇಕೆನ್ನುವ ವಿಚಾರವಾಗಿ ಶ್ರದ್ಧಾ ಮತ್ತು ಆಫ್ತಾಬ್‌ ನಡುವೆ ಜಗಳವಾಗಿತ್ತು ಎನ್ನುವುದನ್ನು ಆಫ್ತಾಬ್ ವಿಚಾರಣೆ ವೇಳೆ ದೆಹಲಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೆಳದವಡೆಯ ದೃಢೀಕರಣಕ್ಕೆದಂತ ವೈದ್ಯರಿಗೆ ಮೊರೆ
ನವದೆಹಲಿ:
ಶ್ರದ್ಧಾ ಹತ್ಯೆ ತನಿಖೆಯಲ್ಲಿ ಪತ್ತೆಯಾದ ಮನುಷ್ಯನ ಕೆಳದವಡೆಯು 27 ವರ್ಷ ವಯಸ್ಸಿನ ವ್ಯಕ್ತಿಯದ್ದೇ ಎಂಬ ದೃಢೀಕರಣಕ್ಕಾಗಿ ಪೊಲೀಸರು ದಂತ ವೈದ್ಯರ ಮೊರೆ ಹೋಗಿದ್ದಾರೆ.

‘ಬರೀ ಫೋಟೊದಿಂದ ಏನನ್ನೂ ಹೇಳಲಾಗದು.ಶ್ರದ್ಧಾಳ ರೂಟ್ ಕ್ಯಾನೆಲ್ ಸಮಸ್ಯೆಗೆ ಚಿಕಿತ್ಸೆ ನೀಡಿದ್ದ ಮುಂಬೈ ವೈದ್ಯರಿಂದ ಎಕ್ಸ್‌ ರೇ ಪಡೆಯುವಂತೆ ಪೊಲೀಸರಿಗೆ ಹೇಳಿದ್ದೇನೆ’ ಎಂದು ಹೆಸರು ಹೇಳಲಿಚ್ಛಿಸದ ದಂತ ವೈದ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.