ADVERTISEMENT

ಅಂತರಿಕ್ಷದಲ್ಲಿ ಮೆಂತ್ಯ, ಹೆಸರುಕಾಳು ಮೊಳಕೆ: ಯಶಸ್ವಿ ಪ್ರಯೋಗ ನಡೆಸಿದ ಶುಕ್ಲಾ

ಧಾರವಾಡ ವಿಜ್ಞಾನಿಗಳ ನೇತೃತ್ವದಲ್ಲಿ ಅಂತರಿಕ್ಷದಲ್ಲಿ ಮೊಳಕೆ ಪ್ರಯೋಗ

ಪಿಟಿಐ
Published 9 ಜುಲೈ 2025, 11:07 IST
Last Updated 9 ಜುಲೈ 2025, 11:07 IST
   

ನವದೆಹಲಿ: ಆಕ್ಸಿಯಂ–4 ಮಿಷನ್ ಅಡಿ ವಿವಿಧ ಪ್ರಯೋಗಗಳನ್ನು ನಡೆಸಲು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ತೆರಳಿರುವ ಭಾರತ ಮೂಲದ ಗಗನಯಾನಿ ಶುಭಾಂಶು ಶುಕ್ಲಾ, ಅಂತರಿಕ್ಷದಲ್ಲಿ ಹೆಸರುಕಾಳು ಮತ್ತು ಮೆಂತ್ಯ ಬೀಜಗಳನ್ನು ನೆಟ್ಟು ಮೊಳಕೆ ಹೊಡೆಸುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಈ ಸಂಬಂಧಿತ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಿದು ಬೀಜಗಳ ಮೊಳಕೆಯೊಡೆಯುವಿಕೆ ಮತ್ತು ಸಸ್ಯ ಬೆಳವಣಿಗೆಗೆ ಸೂಕ್ಷ್ಮ ಗುರುತ್ವಾಕರ್ಷಣೆಯು ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತಾದ ಅಧ್ಯಯನದ ಭಾಗವಾಗಿದೆ.

ಶುಕ್ಲಾ ಮತ್ತು ಅವರ ಸಹವರ್ತಿಗಳಾದ ಆಕ್ಸಿಯಂ-4 ಗಗನಯಾನಿಗಳು ಕಕ್ಷೆಯ ಪ್ರಯೋಗಾಲಯದಲ್ಲಿ 12 ದಿನಗಳನ್ನು ಕಳೆದಿದ್ದಾರೆ. ಫ್ಲಾರಿಡಾ ಕರಾವಳಿಯ ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಜುಲೈ 10ರ ನಂತರ ಯಾವುದೇ ದಿನ ಅವರು ಭೂಮಿಗೆ ಮರಳುವ ನಿರೀಕ್ಷೆಯಿದೆ.

ADVERTISEMENT

ಬಾಹ್ಯಾಕಾಶ ನಿಲ್ದಾಣದಿಂದ ಆಕ್ಸಿಯಂ-4 ಮಿಷನ್ ನೌಕೆಯನ್ನು ವಾಪಸ್ ಕರೆಸಿಕೊಳ್ಳುವ ದಿನಾಂಕವನ್ನು ನಾಸಾ ಇನ್ನೂ ಘೋಷಿಸಿಲ್ಲ.

‘ನಾನು ಈಗ ಐಎಸ್‌ಎಸ್ ಕಕ್ಷೆಯಲ್ಲಿ ನಡೆಸುತ್ತಿರುವ ಅದ್ಭುತ ಸಂಶೋಧನೆಗಳಿಗೆ ಇಸ್ರೊ ದೇಶದಾದ್ಯಂತದ ಇರುವ ರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ನೆರವು ನೀಡಿದೆ. ಇದೊಂದು ರೋಮಾಂಚಲಕಾರಿ ಮತ್ತು ಸಂತೋಷಕರ ಸಂಗತಿಯಾಗಿದೆ’ಎಂದು ಬುಧವಾರ ಆಕ್ಸಿಯಂನ ವಿಜ್ಞಾನಿ ಲೂಸಿ ಲೋ ಅವರೊಂದಿಗಿನ ಸಂವಾದದಲ್ಲಿ ಶುಕ್ಲಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊಳಕೆ ಪ್ರಯೋಗಕ್ಕೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ರವಿಕುಮಾರ್ ಹೊಸಮನಿ ಮತ್ತು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸುಧೀರ್ ಸಿದ್ದಾಪುರರೆಡ್ಡಿ ಎಂಬ ಇಬ್ಬರು ವಿಜ್ಞಾನಿಗಳು ನೇತೃತ್ವ ವಹಿಸಿದ್ದಾರೆ.

ಭೂಮಿಗೆ ಹಿಂದಿರುಗಿದ ನಂತರ, ಬೀಜಗಳನ್ನು ಅವುಗಳ ತಳಿಶಾಸ್ತ್ರ, ಸೂಕ್ಷ್ಮಜೀವಿಯ ಪರಿಸರ ವ್ಯವಸ್ಥೆಗಳು ಮತ್ತು ಪೌಷ್ಟಿಕಾಂಶದ ಅಂಶಗಳಲ್ಲಿನ ಬದಲಾವಣೆಗಳನ್ನು ಪರೀಕ್ಷಿಸಲು ಹಲವಾರು ತಲೆಮಾರುಗಳವರೆಗೆ ಬೆಳೆಸಲಾಗುತ್ತದೆ ಎಂದು ಆಕ್ಸಿಯಂ ಸ್ಪೇಸ್‌ ಹೇಳಿಕೆ ತಿಳಿಸಿದೆ.

ಮತ್ತೊಂದು ಪ್ರಯೋಗದಲ್ಲಿ, ಶುಕ್ಲಾ ಸೂಕ್ಷ್ಮ ಪಾಚಿಗಳನ್ನು ಅಲ್ಲಿ ನೆಟ್ಟಿದ್ದು, ಇವುಗಳ ಆಹಾರ, ಆಮ್ಲಜನಕ ಮತ್ತು ಜೈವಿಕ ಇಂಧನಗಳನ್ನು ಉತ್ಪಾದಿಸುವ ಸಾಮರ್ಥ್ಯ ಪರೀಕ್ಷೆಗಾಗಿ ಈ ಪ್ರಯೋಗ ನಡೆಸಲಾಗುತ್ತಿದೆ. ಅವುಗಳ ಸ್ಥಿತಿಸ್ಥಾಪಕತ್ವ ಮತ್ತು ಬಹುಮುಖತೆಯು ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ನೆರವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.