ADVERTISEMENT

ಅಫ್ಜಲ್‌ ಗುರು ಗಲ್ಲಿಗೇರಿಸಿ ಎಂಟು ವರ್ಷ: ಕಾಶ್ಮೀರದಾದ್ಯಂತ ಬಂದ್‌

ಪಿಟಿಐ
Published 9 ಫೆಬ್ರುವರಿ 2021, 8:32 IST
Last Updated 9 ಫೆಬ್ರುವರಿ 2021, 8:32 IST
ಉಗ್ರ ಅ‌ಫ್ಜಲ್ ಗುರು ನೇಣಿಗೇರಿಸಿ ಎಂಟು ವರ್ಷವಾಗಿದ್ದು ಇದರ ಸ್ಮರಣಾರ್ಥ ಪ್ರತ್ಯೇಕತಾವಾದಿಗಳು ಕಾಶ್ಮೀರ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ವಾಹನ ಸವಾರರ ತಪಾಸಣೆ ನಡೆಸುತ್ತಿರುವ ದೃಶ್ಯ
ಉಗ್ರ ಅ‌ಫ್ಜಲ್ ಗುರು ನೇಣಿಗೇರಿಸಿ ಎಂಟು ವರ್ಷವಾಗಿದ್ದು ಇದರ ಸ್ಮರಣಾರ್ಥ ಪ್ರತ್ಯೇಕತಾವಾದಿಗಳು ಕಾಶ್ಮೀರ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ವಾಹನ ಸವಾರರ ತಪಾಸಣೆ ನಡೆಸುತ್ತಿರುವ ದೃಶ್ಯ   

ಶ್ರೀನಗರ: ಸಂಸತ್‌ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್‌ ಗುರು ನೇಣಿಗೇರಿದ ಎಂಟನೇ ವರ್ಷದ ಸ್ಮರಣೋತ್ಸವ ಅಂಗವಾಗಿ ಮಂಗಳವಾರ ಕಣಿವೆ ರಾಜ್ಯದಾದ್ಯಂತ ಜೆಕೆಲ್‌ಎಫ್‌ ಸಂಘಟನೆ ಕರೆ ನೀಡಿದ್ದ ಬಂದ್‌ನಿಂದಾಗಿ ಜನಜೀವನ ಅಸ್ತವ್ಯವಸ್ಥಗೊಂಡಿತ್ತು.

ಫೆಬ್ರುವರಿ 9, 2013ರಂದು ಅಫ್ಜಲ್‌ ಗುರು ಹಾಗೂ ಫೆ.11ರಂದು ಜೆಕೆಎಲ್‌ಎಫ್ ಸಂಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಇವರಿಬ್ಬರ ಸ್ಮರಣಾರ್ಥ ಫೆಬ್ರವರಿ 9 ಮತ್ತು 11 ರಂದು ಕಣಿವೆ ರಾಜ್ಯದಾದ್ಯಂತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಸಂಘಟನೆ ಬಂದ್‌ಗೆ ಕರೆ ನೀಡಿತ್ತು.

ಬಂದ್‌ನಿಂದಾಗಿ ಶ್ರೀನಗರ ಸೇರಿದಂತೆ ಕಣಿವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಹುತೇಕ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು ಮತ್ತು ವ್ಯಾಪಾರ ಕೇಂದ್ರಗಳು ಸ್ಥಗಿತಗೊಂಡಿದ್ದವು. ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂದ್‌ ನಡುವೆಯೂ ನಗರದಲ್ಲಿ ಖಾಸಗಿ ಕಾರುಗಳು, ಆಟೋರಿಕ್ಷಾಗಳು ಮತ್ತು ಕ್ಯಾಬ್‌ಗಳು ಸಂಚರಿಸುತ್ತಿವೆ ಎಂದು ಅವರು ಹೇಳಿದರು.

ADVERTISEMENT

ಬಂದ್‌ ವೇಳೆ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಪ್ಪಿಸಲು ನಗರ ಮತ್ತು ಕಣಿವೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‌ಎರಡು ದಿನಗಳ ಬಂದ್‌ಗೆ ಕರೆ ನೀಡಿರುವ ಕುರಿತು ಹುರಿಯತ್ ಕಾನ್ಫರೆನ್ಸ್‌ ನಾಯಕರು ನಗರದಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಕೆಲವೊಂದು ಪ್ರದೇಶಗಳಲ್ಲಿ ಅಂಟಿಸಲಾಗಿತ್ತು ಎಂದು ತಿಳಿದುಬಂದಿದೆ. ‘ಆ ಪೋಸ್ಟರ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.