ಶ್ವೇತಾ ಮೆನನ್
Credit: X
ಕೊಚ್ಚಿ: ಬಹುಭಾಷಾ ನಟಿ ಶ್ವೇತಾ ಮೆನನ್ ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ. ಅಲ್ಲದೆ, ಅವರು ಅಶ್ಲೀಲ ವಿಡಿಯೊಗಳನ್ನು ವಿವಿಧ ವೆಬ್ಸೈಟ್ಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ ಎಂದು ಆಪಾದಿಸಿ ದಾಖಲಿಸಿರುವ ದೂರಿನ ವಿಚಾರಣೆಗೆ ಕೇರಳ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಶ್ವೇತಾ ಮೆನನ್ ಸಲ್ಲಿಸಿದ್ದ ಅರ್ಜಿ ಆಧರಿಸಿ ನ್ಯಾಯಮೂರ್ತಿ ವಿ.ಜಿ. ಅರುಣ್ ಅವರು ಮಧ್ಯಂತರ ಆದೇಶ ಹೊರಡಿಸಿದ್ದು, ಪ್ರಕರಣ ಸಂಬಂಧ ಪೊಲೀಸರು ಮತ್ತು ದೂರುದಾರರಿಗೆ ನೋಟಿಸ್ ನೀಡಿದ್ದಾರೆ.
ಈ ವಿಷಯವಾಗಿ ಆರ್‌ಟಿಐ ಕಾರ್ಯಕರ್ತ ಮಾರ್ಟಿನ್ ಮೆನಶೆರಿ ಅವರು ಶ್ವೇತಾ ಮೆನನ್ ವಿರುದ್ಧ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎರ್ನಾಕುಲಂ ಸಿಜೆಎಂ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಶ್ವೇತಾ ಮೆನನ್ ವಿರುದ್ಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಮಲಯಾಳಂ ಚಲನಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಮೆನನ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಆಗಸ್ಟ್ 15ರಂದು ಚುನಾವಣೆ ನಡೆಯಲಿದೆ.
ಶ್ವೇತಾ ಮೆನನ್ ಮೂಲತಹ ಚಂಡೀಗಢದವರು. ನಟಿಯಾಗಿ, ಮಾಡೆಲ್ ಆಗಿ ಹಾಗೂ ಟಿವಿ ಆ್ಯಂಕರ್ ಆಗಿ ಗುರುತಿಸಿಕೊಂಡಿರುವ ಅವರು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಪರಿಚಿತರಾಗಿದ್ದಾರೆ. ಶ್ವೇತಾ ಅವರು ಕನ್ನಡದಲ್ಲಿ ಉಪೇಂದ್ರ ಅಭಿನಯದ ‘ಓಂಕಾರ’ ಚಿತ್ರದಲ್ಲೂ ನಟಿಸಿದ್ದರು. ಶ್ವೇತಾ ಅವರು ಕಿರುತೆರೆ ಲೋಕದಲ್ಲೂ ಗಮನ ಸೆಳೆದಿದ್ದಾರೆ. ‘ಬಿಗ್ ಬಾಸ್ ಮಲಯಾಳಂ ಸೀಸನ್ 1’ರಲ್ಲಿ ಸ್ಪರ್ಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.