ADVERTISEMENT

ಕಾವೇರಿ ನೀರು ಬಿಡದೆ ಸಿದ್ದರಾಮಯ್ಯ, ಡಿಕೆಶಿ ಮೊಂಡುತನ: ತಮಿಳುನಾಡು ಸಚಿವ ಟೀಕೆ

ಹೆಚ್ಚಿನ ನೀರು ಬಿಡಲು ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 14:53 IST
Last Updated 31 ಅಕ್ಟೋಬರ್ 2023, 14:53 IST
<div class="paragraphs"><p>ಕಾವೇರಿ ನೀರು</p></div>

ಕಾವೇರಿ ನೀರು

   

ಚೆನ್ನೈ: ಈ ವಾರ ನಡೆಯಲಿರುವ  'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ)’ ಸಭೆಯಲ್ಲಿ ತಮಿಳುನಾಡಿನ ಪರವಾಗಿ ಆದೇಶ ಬಾರದೇ ಹೋದರೆ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಜಲಸಂಪನ್ಮೂಲ ಸಚಿವ ದೊರೈಮುರುಗನ್‌ ಮಂಗಳವಾರ ಹೇಳಿದ್ದಾರೆ. 

ರಾಜ್ಯಕ್ಕೆ ನೀರು ಹರಿಸಲು ನಿರಾಕರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಮೊಂಡುವಾದ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.  

ADVERTISEMENT

’ತಮಿಳುನಾಡಿಗೆ 2,600 ಕ್ಯೂಸೆಕ್‌ ನೀರು ಹರಿಸುವಂತೆ ಸಿಡಬ್ಲ್ಯುಸಿ ಕರ್ನಾಟಕಕ್ಕೆ ಸೂಚನೆ ನೀಡಿದೆ. ಆದರೆ, 13,000 ಕ್ಯೂಸೆಕ್‌ ನೀರು ಅಗತ್ಯವಿದೆ. ಈ ವಿಚಾರವನ್ನು ನ.3ರ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು.  ರಾಜ್ಯಕ್ಕೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸುವಂತೆ ಆಗ್ರಹಿಸಲಾಗುವುದು’ ಎಂದು ದೊರೈಮುರುಗನ್‌ ಹೇಳಿದರು.  

‘ಸುಪ್ರೀಂ ಕೋರ್ಟ್‌ನ 2018ರ ತೀರ್ಪಿನಂತೆ ತಿಂಗಳ ಆಧಾರದಲ್ಲಿ ಜೂನ್‌ 1ರಿಂದ ಅಕ್ಟೋಬರ್‌ 26ರ ಅವಧಿಯಲ್ಲಿ ತಮಿಳುನಾಡಿಗೆ 140 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕು. ಆದರೆ, ಕೇವಲ 56.4 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಾಗಿದೆ. 83.6 ಟಿಎಂಸಿ ಅಡಿ ನೀರು ಬಾಕಿ ಇದೆ. ಸಂಕಷ್ಟ ಸೂತ್ರದ ಪ್ರಕಾರ ನೋಡಿದರೂ ತಮಿಳುನಾಡಿಗೆ ಕಡಿಮೆ ನೀರು ಸಿಕ್ಕಿದೆ’ ಎಂದು ಅವರು ತಿಳಿಸಿದರು.  

‘ಈ ದೇಶದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಆದರೆ, ಇಲ್ಲಿ ಸರ್ಕಾರವೇ ತೀರ್ಪನ್ನು ಅಗೌರವಿಸುತ್ತಿದೆ. ಜಲಸಂಪನ್ಮೂಲ ಸಚಿವನಾಗಿ ನನ್ನ ಅನುಭವದಲ್ಲಿ ಸಾಕಷ್ಟು ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರನ್ನು ನಾನು ನೋಡಿದ್ದೇನೆ. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಅವರಂಥ ಮೊಂಡುತನ ಮಾಡುವ, ಹಟ ಮಾಡುವವರನ್ನು ನಾನು ಈ ವರೆಗೆ ನೋಡಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ತಮಿಳುನಾಡಿಗೆ 2,600 ಕ್ಯೂಸೆಕ್‌ ನೀರು ಹರಿಸುವಂತೆ ಸಿಡಬ್ಲ್ಯುಸಿ ನೀಡಿದ್ದ ಇತ್ತೀಚಿನ ಸೂಚನೆಗೆ ಪ್ರತಿಕ್ರಿಯಿಸಿದ್ದ ಡಿಕೆಶಿ, ‘ಜಲಾಶಯಗಳಲ್ಲಿ ನೀರಿಲ್ಲ. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ದೊರೈಮುರುಗನ್‌ ಅವರು ಆಕ್ರೋಶ ಹೊರಹಾಕಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.