ಬಲಕೌರ್ ಸಿಂಗ್
ಕೃಪೆ: ಪಿಟಿಐ
ಚಂಡೀಗಢ: ಪಂಜಾಬ್ ವಿಧಾನಸಭೆಗೆ 2027ರಲ್ಲಿ ನಡೆಯುವ ಚುನಾವಣೆಯಲ್ಲಿ ಮಾನ್ಸಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಯಕೆ ಇದೆ ಎಂದು 2022ರಲ್ಲಿ ಹತ್ಯೆಯಾದ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಬಲಕೌರ್ ಸಿಂಗ್ ಹೇಳಿಕೊಂಡಿದ್ದಾರೆ.
ಮೂಸೆವಾಲಾ ಅವರು 2022ರಲ್ಲಿ ಮಾನ್ಸಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎಎಪಿ ಅಭ್ಯರ್ಥಿ ಎದುರು ಸೋಲು ಕಂಡಿದ್ದರು.
ಮಾನ್ಸಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಸಿಂಗ್, ಮಗನನ್ನು ಕಳೆದುಕೊಂಡ ತಮಗೆ ಮಾನ್ಸಾ ಜನರೇ ಶಕ್ತಿ ತುಂಬಿದರು. ತಮ್ಮ ಕುಟುಂಬದ ಬೆಂಬಲಕ್ಕೆ ನಿಂತರು ಎಂದಿದ್ದಾರೆ.
'ನಾವು ಚುನಾವಣೆಯಲ್ಲಿ ಹೋರಾಡುತ್ತೇವೆ. ಅದಕ್ಕೆ ನಿಮ್ಮ ಸಹಕಾರ ಬೇಕಿದೆ' ಎಂದು ಕೋರಿರುವ ಅವರು, 'ನೀವೇ ನನ್ನ ಶಕ್ತಿ' ಎಂದು ಹೇಳಿದ್ದಾರೆ.
'ವಿಧಾನಸಭೆ ಪ್ರವೇಶಿಸಬೇಕು ಎಂಬುದು ನನ್ನ ಮಗನ ಬಯಕೆಯಾಗಿತ್ತು. ಆದರೆ, ಅದು ಈಡೇರಲಿಲ್ಲ. ನಾನು ಚುನಾವಣೆಯಲ್ಲಿ ಗೆದ್ದು, ಮಗನ ಭಾವಚಿತ್ರವನ್ನು ವಿಧಾನಸಭೆಗೆ ತೆಗೆದುಕೊಂಡು ಹೋಗಿ, ಆ ಆಸೆಯನ್ನು ಈಡೇರಿಸುತ್ತೇನೆ' ಎಂದು ಸಿಂಗ್ ತಿಳಿಸಿದ್ದಾರೆ.
ಸಿಧು ಮೂಸೆವಾಲಾ ಎಂದೇ ಜನಪ್ರಿಯರಾಗಿದ್ದ ಶುಭದೀಪ್ ಸಿಂಗ್ ಸಿಧು ಅವರನ್ನು 2022ರ ಮೇ 29ರಂದು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.