ADVERTISEMENT

ಬ್ರಿಟಿಷ್‌ ಹೈಕಮಿಷನ್‌ ಎದುರು ಸಿಖ್ಖರ ಪ್ರತಿಭಟನೆ

ಪಿಟಿಐ
Published 20 ಮಾರ್ಚ್ 2023, 16:36 IST
Last Updated 20 ಮಾರ್ಚ್ 2023, 16:36 IST
ಸಿಖ್ಖ್‌ ಸಮುದಾಯದ ಹಲವರು ಬ್ರಿಟಿಷ್‌ ಹೈಕಮಿಷನ್‌ ಎದುರು ಸೋಮವಾರ ಪ್ರತಿಭಟನೆ ನಡೆಸಿದರು–ಎಎಫ್‌ಪಿ ಚಿತ್ರ 
ಸಿಖ್ಖ್‌ ಸಮುದಾಯದ ಹಲವರು ಬ್ರಿಟಿಷ್‌ ಹೈಕಮಿಷನ್‌ ಎದುರು ಸೋಮವಾರ ಪ್ರತಿಭಟನೆ ನಡೆಸಿದರು–ಎಎಫ್‌ಪಿ ಚಿತ್ರ    

ನವದೆಹಲಿ: ಖಾಲಿಸ್ತಾನ ಪರ ಪ್ರತಿಭಟನೆ ಕೈಗೊಂಡಿದ್ದ ಪ್ರತ್ಯೇಕತಾವಾದಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದ ಘಟನೆಯನ್ನು ಖಂಡಿಸಿ ಸಿಖ್ಖ್‌ ಸಮುದಾಯಕ್ಕೆ ಸೇರಿದ ಹಲವರು ಇಲ್ಲಿನ ಚಾಣಕ್ಯ‍ಪುರಿಯಲ್ಲಿರುವ ಬ್ರಿಟಿಷ್‌ ಹೈಕಮಿಷನ್ ಎದುರು ಸೋಮವಾರ ಪ‍್ರತಿಭಟನೆ ನಡೆಸಿದ್ದಾರೆ.

ತ್ರಿವರ್ಣ ಧ್ವಜ ಹಾಗೂ ಭಿತ್ತಿ ಪತ್ರಗಳನ್ನು ಹಿಡಿದಿದ್ದ ಪ್ರತಿಭಟನಕಾರರು ‘ಭಾರತ ನಮ್ಮ ಹೆಮ್ಮೆ’ ಎಂಬ ಘೋಷಣೆಗಳನ್ನು ಕೂಗಿದರು. ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದರೆ ಸಹಿಸುವುದಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ಲಂಡನ್‌ನಲ್ಲಿ ನಡೆದಿರುವ ಘಟನೆಯು ದುರದೃಷ್ಟಕರ. ಭಾರತದ ಬಗ್ಗೆ ನಮಗೆ ಹೆಮ್ಮೆ ಇದೆ. ಘಟನೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಬ್ರಿಟನ್‌ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಷ್ಟ್ರಧ್ವಜವನ್ನು ಗೌರವಿಸದೆ ಇರುವವರು ಮತ್ತೊಬ್ಬ ವ್ಯಕ್ತಿ, ಮತ್ತೊಂದು ದೇಶ ಅಥವಾ ಇತರೆ ಯಾವುದೇ ಧರ್ಮವನ್ನು ಗೌರವಿಸಲಾರರು’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ADVERTISEMENT

‘ಸಿಖ್ಖರು ಈ ದೇಶದ ಅವಿಭಾಜ್ಯ ಅಂಗ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಶಾಂತಿಯ ಸಂದೇಶ ರವಾನಿಸಲು ಬಯಸುತ್ತೇವೆ. ತ್ರಿವರ್ಣ ಧ್ವಜಕ್ಕೆ ಅವಮಾನವಾದರೆ ಖಂಡಿತವಾಗಿಯೂ ಸಹಿಸುವುದಿಲ್ಲ’ ಎಂದೂ ಕಿಡಿಕಾರಿದ್ದಾರೆ.

ಭಾನುವಾರ ಬ್ರಿಟನ್‌ನ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡಿದ್ದ ಭಾರತದ ವಿದೇಶಾಂಗ ಸಚಿವಾಲಯವು ಘಟನೆ ಕುರಿತು ವಿವರಣೆ ಕೇಳಿತ್ತು. ಭದ್ರತಾ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಸಂಬಂಧ ಬ್ರಿಟನ್‌ ಸರ್ಕಾರದ ಎದುರು ಪ‍್ರತಿಭಟನೆಯನ್ನೂ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.