ADVERTISEMENT

ಪೌರತ್ವ ದೃಢೀಕರಿಸಲು 'ಆಧಾರ್‌' ದಾಖಲೆ ಅಲ್ಲ: ಒಪ್ಪಿದ ಸುಪ್ರೀಂ ಕೋರ್ಟ್ 

ಪಿಟಿಐ
Published 12 ಆಗಸ್ಟ್ 2025, 16:24 IST
Last Updated 12 ಆಗಸ್ಟ್ 2025, 16:24 IST
   

ನವದೆಹಲಿ: ಪೌರತ್ವವನ್ನು ದೃಢೀಕರಿಸಲು ಆಧಾರ್‌ ಕಾರ್ಡ್‌ ಅನ್ನು ನಿರ್ಣಾಯಕ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಚುನಾವಣಾ ಆಯೋಗದ ನಿಲುವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಒಪ್ಪಿಕೊಂಡಿದೆ.

ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಮಹತ್ವದ ನಿಲುವು ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರು ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ. 

ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಪತ್ರ (ಎಪಿಕ್) ಮತ್ತು ಪಡಿತರ ಚೀಟಿಗಳನ್ನು ಪೌರತ್ವ ದೃಢೀಕರಿಸಲು ನಿರ್ಣಾಯಕ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದನ್ನು ಒಪ್ಪಿಕೊಂಡ ಪೀಠ, ‘ಈ ದಾಖಲೆಗಳಿಗೆ ಬೆಂಬಲವಾಗಿ ಇತರೆ ದಾಖಲೆಗಳನ್ನೂ ನೀಡಬೇಕು’ ಎಂದು ಹೇಳಿತು.

ADVERTISEMENT

‘ಆಧಾರ್‌ ಅನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಹೇಳುವುದು ಸರಿಯಾಗಿಯೇ ಇದೆ. ಆಧಾರ್‌ ಅನ್ನೂ ಪರಿಶೀಲನೆಗೆ ಒಳಪಡಿಸಬೇಕು. ಆಧಾರ್ ಕಾಯ್ದೆಯ ಸೆಕ್ಷನ್ 9 ನಿರ್ದಿಷ್ಟವಾಗಿ ಅದನ್ನೇ ಹೇಳುತ್ತದೆ’ ಎಂದು ಪೀಠವು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರಿಗೆ ತಿಳಿಸಿತು.

ಆಧಾರ್‌ ಕಾರ್ಡ್‌, ಎಪಿಕ್ ಮತ್ತು ಪಡಿತರ ಚೀಟಿಗಳನ್ನು ಹೊಂದಿದ್ದರೂ ಬಿಹಾರದಲ್ಲಿ ಅಧಿಕಾರಿಗಳು ಅವುಗಳನ್ನು ದಾಖಲೆಯಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ಆರ್‌ಜೆಡಿ ನಾಯಕ ಮನೋಜ್‌ ಝಾ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ವಿಚಾರಣೆ ವೇಳೆ ವಾದಿಸಿದರು.

‘ಒಬ್ಬನ ಬಳಿ ಯಾವುದೇ ದಾಖಲೆಗಳಿಲ್ಲ. ಆದರೆ, ಬಿಹಾರದಲ್ಲಿ ನೆಲಸಿದ್ದಾನೆ ಎಂಬ ಕಾರಣ ಆತನನ್ನು ಆ ರಾಜ್ಯದ ಮತದಾರನೆಂದು ಪರಿಗಣಿಸಬೇಕು ಎಂಬುದು ನಿಮ್ಮ ವಾದವೇ? ನಿಮ್ಮ ವಾದವನ್ನು ಒಪ್ಪಬಹುದು. ಆದರೆ, ಅದಕ್ಕಾಗಿ ಅವರು ಕೆಲವು ದಾಖಲೆಗಳನ್ನು ಒದಗಿಸಬೇಕು’ ಎಂದು ಪೀಠ ಸ್ಪಷ್ಟಪಡಿಸಿತು.

ಜನನ ಪ್ರಮಾಣಪತ್ರ ಮತ್ತು ಪೋಷಕರ ಇತರ ದಾಖಲೆಗಳನ್ನು ಹುಡುಕಲು ಜನರು ಹೆಣಗಾಡುತ್ತಿದ್ದಾರೆ ಎಂದು ಸಿಬಲ್ ಹೇಳಿದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, ‘ಬಿಹಾರದಲ್ಲಿ ಯಾರ ಬಳಿಯೂ ದಾಖಲೆಗಳಿಲ್ಲ ಎಂಬುದು ಆಧಾರವಿಲ್ಲದ ಹೇಳಿಕೆಯಾಗಿದೆ. ನೀವು ಹೇಳಿದಂತೆ ಬಿಹಾರದಲ್ಲಿ ಜನರು ದಾಖಲೆಗಳನ್ನು ಹುಡುಕಲು ಪರದಾಡುತ್ತಿದ್ದಾರೆ ಎಂದಾದರೆ, ದೇಶದ ಇತರ ಭಾಗಗಳಲ್ಲಿ ಪರಿಸ್ಥಿತಿ ಏನಿರಬಹುದು’ ಎಂದು ಪ್ರಶ್ನಿಸಿದರು. 

ಆರ್‌ಜೆಡಿಯ ಮನೋಜ್‌ ಝಾ ಅಲ್ಲದೆ ಮಹುವಾ ಮೊಯಿತ್ರಾ (ಟಿಎಂಸಿ), ಕೆ.ಸಿ.ವೇಣುಗೋಪಾಲ್ (ಕಾಂಗ್ರೆಸ್), ಸುಪ್ರಿಯಾ ಸುಳೆ (ಎನ್‌ಸಿಪಿ ಶರದ್‌ ಪವಾರ್‌ ಬಣ) ಮತ್ತು ಡಿ.ರಾಜಾ (ಸಿಪಿಐ) ಸೇರಿದಂತೆ ಹಲವರು ಎಸ್‌ಐಆರ್‌ ವಿರುದ್ಧ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಬುಧವಾರವೂ ಮುಂದುವರಿಯಲಿದೆ.

ಪೀಠ ಹೇಳಿದ್ದು....

  • ಪೌರತ್ವವನ್ನು ನೀಡುವ ಅಥವಾ ಹಿಂತೆಗೆದುಕೊಳ್ಳುವ ಕಾನೂನನ್ನು ಸಂಸತ್ತು ಅಂಗೀಕರಿಸಬೇಕು. ಆದರೆ, ಪೌರತ್ವ ಹೊಂದಿರುವವರು ಮತ್ತು ಹೊಂದಿಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸುವ ಹಾಗೂ ಹೊರಗಿಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ

  • ಜೀವಂತ ವ್ಯಕ್ತಿಯನ್ನು ‘ಸತ್ತಿದ್ದಾನೆ’ ಎಂದು ಘೋಷಿಸಿರುವ ಅಥವಾ ಸತ್ತ ವ್ಯಕ್ತಿಯನ್ನು ‘ಜೀವಂತವಾಗಿದ್ದಾನೆ’ ಎಂದು ತೋರಿಸಿರುವ ಲೋಪಗಳನ್ನು ಸರಿಪಡಿಸಲು ಅವಕಾಶವಿದೆ

  • ಎಸ್‌ಐಆರ್‌ನಲ್ಲಿ ಅಕ್ರಮ ಕಂಡುಬಂದರೆ ಇಡೀ ಪ್ರಕ್ರಿಯೆಯನ್ನು ರದ್ದುಪಡಿಸಲಾಗುವುದು ಎಂದು ಈ ಹಿಂದೆ ಹೇಳಿದ್ದ ಸುಪ್ರೀಂ ಕೋರ್ಟ್‌, ಅದನ್ನು ಪುನರುಚ್ಚರಿಸಿದೆ

‘ಎಸ್‌ಐಆರ್‌ ವಿಶ್ವಾಸ ಕೊರತೆಯ ವಿಚಾರ’

ಎಸ್‌ಐಆರ್‌ಗೆ ಸಂಬಂಧಿಸಿದ ವಿವಾದ ‘ವಿಶ್ವಾಸದ ಕೊರತೆಯ ವಿಚಾರ’ ಎಂದು ಪೀಠವು ಹೇಳಿದೆ. ‘ಬಿಹಾರದಲ್ಲಿ ಒಟ್ಟು 7.9 ಕೋಟಿ ಮತದಾರರಿದ್ದಾರೆ. ಅವರಲ್ಲಿ 2003ರ ಮತದಾರರ ಪಟ್ಟಿಯಲ್ಲಿದ್ದ ಸುಮಾರು 6.5 ಕೋಟಿ ಮಂದಿ ತಾವು ರಾಜ್ಯದ ಮತದಾರರು ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆ ನೀಡಬೇಕಾಗಿಲ್ಲ ಎಂದು ಆಯೋಗ ಹೇಳಿಕೊಂಡಿದೆ. ಆದ್ದರಿಂದ ಈ ವಿವಾದವು ವಿಶ್ವಾಸದ ಕೊರತೆಯ ವಿಚಾರದಂತೆ ಕಾಣುತ್ತದೆ, ಬೇರೇನೂ ಅಲ್ಲ’ ಎಂದು ಇಬ್ಬರೂ ನ್ಯಾಯಮೂರ್ತಿಗಳು ತಿಳಿಸಿದರು. 

ಒಂದು ಕೋಟಿ ಮತದಾರರ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂಬ ಆಧಾರದ ಮೇಲೆ ಎಸ್‌ಐಆರ್‌ಅನ್ನು ವಿರೋಧಿಸುವ ಅರ್ಜಿದಾರರ ನಿಲುವನ್ನೂ ಪೀಠವು ಪ್ರಶ್ನಿಸಿತು. 

‘7.9 ಕೋಟಿ ಮತದಾರರಲ್ಲಿ 7.24 ಕೋಟಿ ಮಂದಿ ಎಸ್‌ಐಆರ್‌ಗೆ ಸಂಬಂಧಿಸಿದ ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ. ಒಂದು ಕೋಟಿ ಮತದಾರರು ನಾಪತ್ತೆಯಾಗಿದ್ದಾರೆ ಅಥವಾ ಮತದಾನದಿಂದ ವಂಚಿತರಾಗಿದ್ದಾರೆ ಎಂಬ ವಾದವನ್ನು ಈ ಅಂಕಿ–ಅಂಶ ಸುಳ್ಳಾಗಿಸುತ್ತದೆ’ ಎಂದು ಪೀಠ ತಿಳಿಸಿತು.

‘ಸತ್ತಿದ್ದಾರೆ’ ಎಂದವರನ್ನು ಹಾಜರುಪಡಿಸಿದ ಯಾದವ್

ಎಸ್‌ಐಆರ್‌ ವಿರುದ್ಧ ಅರ್ಜಿ ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು ತಾವೇ ವಾದ ಮಂಡಿಸಿದರು. ಚುನಾವಣಾ ಆಯೋಗವು ‘ಸತ್ತಿದ್ದಾರೆ’ ಎಂದು ಹೇಳಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಮೂವರನ್ನು ಅವರು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ನ್ಯಾಯಾಲಯದಲ್ಲಿ ‘ಇಂತಹ ನಾಟಕ’ ನಡೆಸುವುದಕ್ಕೆ ಅವಕಾಶ ನೀಡಬಾರದು’ ಎಂದು ಪ್ರತಿಭಟಿಸಿದರು. ಯಾದವ್‌ ಅವರಿಗೆ ಅಷ್ಟೊಂದು ಕಾಳಜಿಯಿದ್ದರೆ, ಅವರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಿ ದಾಖಲೆಗಳನ್ನು ನವೀಕರಿಸುವ ಕೆಲಸದಲ್ಲಿ ಆಯೋಗಕ್ಕೆ ನೆರವಾಗಬಹುದು ಎಂದರು. ಕರಡು ಪಟ್ಟಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಅವಕಾಶವಿದೆ ಎಂದು ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.