ADVERTISEMENT

ಮತದಾರರ ಕರಡು ಪಟ್ಟಿ ಪ್ರಕಟಣೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಪಿಟಿಐ
Published 28 ಜುಲೈ 2025, 14:12 IST
Last Updated 28 ಜುಲೈ 2025, 14:12 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ಬಿಹಾರದಲ್ಲಿ ಮತದಾರರ ಕರಡು ಪಟ್ಟಿ ಪ್ರಕಟಣೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಲ್ಲಿಸಲಾದ ಎಲ್ಲಾ ಅರ್ಜಿಗಳ ಕುರಿತು ಒಟ್ಟಿಗೆ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜಾಯ್‌ಮಾಲ್ಯಾ ಬಾಗ್ಚಿ ಅವರ ಪೀಠವು ಈ ಕುರಿತ ಅರ್ಜಿಗಳ ಅಂತಿಮ ವಿಚಾರಣೆಯನ್ನು ಜುಲೈ 29ಕ್ಕೆ ನಿಗದಿಪಡಿಸಿದೆ.

ಎನ್‌ಜಿಒ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್‌ ಶಂಕರ್‌ನಾರಾಯಣನ್‌, ಮತದಾರರ ಕರಡು ಪಟ್ಟಿ ಬಿಡುಗಡೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರು, ಮಧ್ಯಂತರ ಪರಿಹಾರಕ್ಕಾಗಿ ಒತ್ತಾಯಿಸುವಂತಿಲ್ಲ. ಈಗ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ತೀರ್ಪನ್ನು ಉಲ್ಲೇಖಿಸಿತು.

ADVERTISEMENT

ಈ ಹಿಂದಿನ ಆದೇಶದಂತೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿ ಪರಿಗಣಿಸುವುದನ್ನು ಮುಂದುವರಿಸಬೇಕು ಎಂದು ಎಂದು ಆಯೋಗಕ್ಕೆ ನ್ಯಾಯಪೀಠ ತಿಳಿಸಿದೆ. ಈ ಎರಡು ದಾಖಲೆಗಳು ‘ಊಹಾತ್ಮಕ ನಿಜಾಯಿತಿ ಹೊಂದಿರುತ್ತವೆ’ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ ನೀಡಿದ ಪ್ರಾಥಮಿಕ ಆದೇಶವನ್ನು ಆಯೋಗವು ಒಪ್ಪಿಕೊಂಡಿದೆ. ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿ ಹಾಗೂ ಪಡಿತರ ಕಾರ್ಡ್‌ಗಳನ್ನು ಸ್ವೀಕರಿಸುವ ಅಗತ್ಯವಿದೆ ಎಂದು ಆಯೋಗವು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

‘ಪಡಿತರ ಕಾರ್ಡ್ ಅನ್ನು ಸುಲಭವಾಗಿ ನಕಲಿ ಮಾಡಲು ಸಾಧ್ಯವಿದೆ. ಆದರೆ, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಯನ್ನು ಸುಲಭವಾಗಿ ನಕಲಿ ಸೃಷ್ಟಿಸಲಾಗದು. ಹೀಗಾಗಿ, ಈ ದಾಖಲಾತಿಗಳನ್ನು ಸ್ವೀಕರಿಸಬೇಕು’ ಎಂದು ನ್ಯಾಯಪೀಠವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.