ನವದೆಹಲಿ: ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಅವರ ತಮ್ಮ ಅಶ್ರಫ್ ಹತ್ಯೆ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸುವಂತೆ ಕೋರಿ ಅವರ ಸಹೋದರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ಪೊಲೀಸರ ವಶದಲ್ಲಿದ್ದಾಗ ತನ್ನ ಸಹೋದರರ ಹತ್ಯೆ ಮಾಡಿರುವ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆಯ ಅಗತ್ಯವಿದೆ’ ಎಂದು ಅರ್ಜಿದಾರರಾದ ಆಯೀಷಾ ನೂರಿ ಅರ್ಜಿಯಲ್ಲಿ ಹೇಳಿದ್ದಾರೆ.
‘ಉತ್ತರ ಪ್ರದೇಶ ಸರ್ಕಾರವು ನನ್ನ ಕುಟುಂಬವನ್ನು ಗುರಿಯಾಗಿಸಿದ್ದು, ಕಿರುಕುಳ ನೀಡುತ್ತಿದೆ. ಬಂಧನ, ಎನ್‌ಕೌಂಟರ್‌ಗಳಲ್ಲಿ ತೊಡಗಿದೆ’ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
‘ಉತ್ತರ ಪ್ರದೇಶ ಸರ್ಕಾರ ಪ್ರಾಯೋಜಿತ ಹತ್ಯೆಯಲ್ಲಿ ನಾನು ನನ್ನ ಸಹೋದರನ್ನು ಹಾಗೂ ಸೋದರ ಸಂಬಂಧಿಯನ್ನು ಕಳೆದುಕೊಂಡಿದ್ದೇನೆ. ಈ ಹತ್ಯೆಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಿ ಸಂವಿಧಾನದ 32ನೇ ವಿಧಿಯಡಿ ಈ ತುರ್ತು ಅರ್ಜಿ ಸಲ್ಲಿಸುತ್ತಿದ್ದೇನೆ’ ಎಂದಿದ್ದಾರೆ.
‘ಪೊಲೀಸರು ಹಾಗೂ ಇತರ ಅಧಿಕಾರಿಗಳು ಸೇರಿದಂತೆ ಪ್ರತಿವಾದಿಗಳಿಗೆ ಉತ್ತರ ಪ್ರದೇಶ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ನನ್ನ ಕುಟುಂಬದ ವಿರುದ್ಧ ಆರೋಪಗಳನ್ನು ಹೊರಿಸಲು, ಸದಸ್ಯರನ್ನು ಬಂಧಿಸಲು, ಹತ್ಯೆ ಮಾಡಲು ಅವರಿಗೆ ಅನುಮತಿ ನೀಡಿದಂತೆ ಕಾಣುತ್ತದೆ’ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿದ್ದ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅವರನ್ನು, ಏಪ್ರಿಲ್‌ನಲ್ಲಿ ಆರೋಗ್ಯ ತಪಾಸಣೆಗಾಗಿ ಪೊಲೀಸರು ಪ್ರಯಾಗ್‌ರಾಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮೂವರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.