ADVERTISEMENT

ಪುರುಷ ಪಾರಮ್ಯ ಮುರಿದ ನಿರ್ಮಲಾ

ಪಿಟಿಐ
Published 31 ಮೇ 2019, 19:45 IST
Last Updated 31 ಮೇ 2019, 19:45 IST
ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಖಾತೆಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದರು. ಹಣಕಾಸು ಖಾತೆಯ ರಾಜ್ಯಸಚಿವ ಅನುರಾಗ್‌ ಸಿಂಗ್‌ ಠಾಕುರ್‌ ಇದ್ದಾರೆ
ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಖಾತೆಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದರು. ಹಣಕಾಸು ಖಾತೆಯ ರಾಜ್ಯಸಚಿವ ಅನುರಾಗ್‌ ಸಿಂಗ್‌ ಠಾಕುರ್‌ ಇದ್ದಾರೆ   

ನವದೆಹಲಿ: ದೇಶದ ರಕ್ಷಣಾ ಖಾತೆಯನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುವ ಮೂಲಕ ದೇಶದ ಮೊದಲ ರಕ್ಷಣಾ ಸಚಿವೆ ಎನಿಸಿಕೊಂಡಿದ್ದ ನಿರ್ಮಲಾ ಸೀತಾರಾಮನ್‌ ಈ ಬಾರಿ ಹೊಸ ದಾಖಲೆ ಮಾಡಿದ್ದಾರೆ. ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಅವರು ಈ ಹೊಣೆಯನ್ನು ಹೊತ್ತ ದೇಶದ ಎರಡನೇ ಮಹಿಳೆ ಎನಿಸಿಕೊಂಡಿದ್ದಾರೆ.

1970–71ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅಲ್ಪ ಅವಧಿಗೆ ಹೆಚ್ಚುವರಿಯಾಗಿ ರಕ್ಷಣಾ ಖಾತೆಯ ಹೊಣೆ ಹೊತ್ತಿದ್ದರು. ಆದರೆ ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಖಾತೆಯನ್ನು ನಿರ್ವಹಿಸಿದ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್‌.

ಇಂದಿರಾ ಗಾಂಧಿ ಅವರು ಒಮ್ಮೆ ಹಣಕಾಸು ಖಾತೆಯನ್ನು ಸಹ ನಿರ್ವಹಿಸಿದ್ದರು. ಈ ಬಾರಿ ನಿರ್ಮಲಾ ಅವರು ಹಣಕಾಸಿನ ಜೊತೆಗೆ ಕಾರ್ಪೊರೇಟ್‌ ವ್ಯವಹಾರಗಳ ಹೊಣೆಯನ್ನೂ ಹೊತ್ತಿದ್ದಾರೆ.

ADVERTISEMENT

ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರವೇಶಿಸಿರುವ ನಿರ್ಮಲಾ ಅವರು, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದವರು. ಆನಂತರ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಕಲಿತವರು. ಲಂಡನ್‌ನ ಪ್ರೈಸ್‌ ವೆದರ್‌ಹೌಸ್‌ ಸಂಸ್ಥೆಯಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ದುಡಿದಿದ್ದ ಅವರು ಅಲ್ಪ ಅವಧಿಗೆ ಬಿಬಿಸಿ ಸಂಸ್ಥೆಯಲ್ಲೂ ಕೆಲಸ ಮಾಡಿದ್ದರು.

ಸ್ವಲ್ಪ ಕಾಲ ಬ್ರಿಟನ್‌ನಲ್ಲಿ ಸೇವೆ ಸಲ್ಲಿಸಿದ ಬಳಿಕ ಭಾರತಕ್ಕೆ ಮರಳಿದ ನಿರ್ಮಲಾ, ಹೈದರಾಬಾದ್‌ನಲ್ಲಿ ಸೆಂಟರ್‌ ಆಫ್‌ ಪಬ್ಲಿಕ್‌ ಪಾಲಿಸಿ ಸ್ಟಡೀಸ್‌ ಸಂಸ್ಥೆಯಲ್ಲಿ ಉಪನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

2008ರಲ್ಲಿ ಬಿಜೆಪಿ ಸೇರಿದ್ದ ಅವರು ಶೀಘ್ರದಲ್ಲೇ ರಾಷ್ಟ್ರ ಕಾರ್ಯಕಾರಿಣಿ ಸದಸ್ಯರಾದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಅವರು ಪಕ್ಷದ ವಕ್ತಾರರೂ ಆಗಿದ್ದರು. ಮೋದಿ ನೇತೃತ್ವದ ಮೊದಲ ಸರ್ಕಾರದಲ್ಲಿ ಆರಂಭದಲ್ಲಿ ಸ್ವತಂತ್ರ ಖಾತೆಯ ರಾಜ್ಯ ಸಚಿವರಾಗಿದ್ದರು. 2017ರ ಸೆಪ್ಟೆಂಬರ್‌ ತಿಂಗಳಲ್ಲಿ ಅವರು ರಕ್ಷಣಾ ಖಾತೆಯ ಪೂರ್ಣ ಹೊಣೆ ಹೊತ್ತರು.

ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿರುವ ನಿರ್ಮಲಾ ಅವರನ್ನು ಅಭಿನಂದಿಸಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಅವರು, ‘ಹಣಕಾಸು ಖಾತೆಯನ್ನು ನಿರ್ವಹಿಸುವ ಮೂಲಕ ಅವರು (ನಿರ್ಮಲಾ) ಪುರುಷ ಪಾರಮ್ಯವನ್ನು ಮುರಿದಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.