ADVERTISEMENT

ಚೀನಾ ಗಡಿಯಲ್ಲಿ ಪರಿಸ್ಥಿತಿ ಗಂಭೀರ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಭಾರತೀಯ ಸೇನೆ

ಏಜೆನ್ಸೀಸ್
Published 4 ಸೆಪ್ಟೆಂಬರ್ 2020, 7:28 IST
Last Updated 4 ಸೆಪ್ಟೆಂಬರ್ 2020, 7:28 IST
ಸೇನಾ ಮುಖ್ಯಸ್ಥ ಎಂ.ಎಂ. ನರವಣೆ
ಸೇನಾ ಮುಖ್ಯಸ್ಥ ಎಂ.ಎಂ. ನರವಣೆ   

ಲಡಾಖ್: ಭಾರತ– ಚೀನಾ ಗಡಿ ಭಾಗದಲ್ಲಿನ ಭದ್ರತಾ ವ್ಯವಸ್ಥೆ ಪರಿಶೀಲನೆಗಾಗಿ ಪೂರ್ವ ಲೇಹ್‌‌ಗೆ ಭೇಟಿ ನೀಡಿರುವ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರು, ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಭಾರತೀಯ ಸೇನೆಯು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಪರಿಸ್ಥಿತಿಯನ್ನು ನಿಭಾಯಿಸಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ಗುರುವಾರ ಲಡಾಖ್‌ಗೆ ಆಗಮಿಸಿದ ನರವಣೆ, ಸೈನಿಕರ ಮನೋಸ್ಥೈರ್ಯ ಹೆಚ್ಚಾಗಿದೆ ಮತ್ತು ಅವರು ಯಾವುದೇ ಸವಾಲನ್ನು ಕೂಡ ಎದುರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ನಿನ್ನೆ ಲೇಹ್ ತಲುಪಿದ ನಂತರ, ನಾನು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅಧಿಕಾರಿಗಳು ಮತ್ತು ಜೆಸಿಒಗಳೊಂದಿಗೆ (ಜೂನಿಯರ್ ಕಮಿಷನ್ಡ್ ಆಫೀಸರ್) ಮಾತನಾಡಿದ್ದೇನೆ. ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ನಮ್ಮ ಯೋಧರ ಮನೋಸ್ಥೈರ್ಯ ತುಂಬಾ ಹೆಚ್ಚಾಗಿದೆ ಮತ್ತು ಅವರು ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ. ನಮ್ಮ ಸೈನಿಕರೇ ಅತ್ಯುತ್ತಮರು ಎಂದು ನಾನು ಹೇಳಬಲ್ಲೆ ಎಂದು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.

ADVERTISEMENT

ಎಲ್ಎಸಿಯ ಉದ್ದಕ್ಕೂ ಸದ್ಯದ ಪರಿಸ್ಥಿತಿ ಸ್ವಲ್ಪ ಸೂಕ್ಷ್ಮ ಮತ್ತು ಗಂಭೀರವಾಗಿದೆ. ಈ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ನಮ್ಮ ಸುರಕ್ಷತೆಗಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಪರಿಸ್ಥಿತಿ ಬದಲಾಗದೆ ಉಳಿಯುತ್ತದೆ ಎನ್ನುವ ಭರವಸೆ ನಮಗಿದೆ. ನಮಗೆ ಸಹಾಯ ಮಾಡುವಂತ ಹಲವು ಕ್ರಮಗಳನ್ನು ನಾವು ಕೈಗೊಂಡಿದ್ದೇವೆ ಎಂದಿದ್ದಾರೆ.

ಲಡಾಖ್‌ನ ಪ್ರದೇಶಗಳಿಗೆ ಅತಿಕ್ರಮಣ ಮಾಡುವ ಚೀನಾ ಸೈನ್ಯದ ಪ್ರಯತ್ನಗಳನ್ನು ಭಾರತೀಯ ಪಡೆಗಳು ವಿಫಲಗೊಳಿಸಿದ ನಂತರ ಭಾರತೀಯ ಸೇನೆ ಮತ್ತು ಚೀನಾ ಸೈನ್ಯದ ನಡುವೆ ಬ್ರಿಗೇಡಿಯರ್ ಮಟ್ಟದ ಮಾತುಕತೆ ನಡೆಯುತ್ತಿದೆ.

ಆಗಸ್ಟ್ 29 ಮತ್ತು 30ರ ಮಧ್ಯ ರಾತ್ರಿಯಲ್ಲಿ ಲಡಾಖ್‌ನ ಚುಶುಲ್ ಬಳಿಯ ದಕ್ಷಿಣ ದಂಡೆಯ ಪಾಂಗೊಂಗ್ ತ್ಸೊ ಬಳಿ ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡಲು ಚೀನಾದ ಸೇನೆಯು ಮಾಡಿದ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು.

ಫಿಂಗರ್ ಪ್ರದೇಶ, ಗಾಲ್ವನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಕೊಂಗ್ರಂಗ್ ನಲಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚೀನಾ ಸೈನ್ಯವು ಮಾಡಿದ ಉಲ್ಲಂಘನೆಗಳ ಬಗ್ಗೆ ಭಾರತ ಮತ್ತು ಚೀನಾ ನಡುವೆ ಏಪ್ರಿಲ್-ಮೇ ತಿಂಗಳಿನಿಂದ ಭಿನ್ನಾಭಿಪ್ರಾಯಗಳು ತಲೆದೋರಿವೆ. ಜೂನ್‌ನಲ್ಲಿ ಗಾಲ್ವನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.