ADVERTISEMENT

6 ಜನರಲ್ಲಿ ಬ್ರಿಟನ್ ವೈರಸ್‌; 33,000 ಪ್ರಯಾಣಿಕರ ಪತ್ತೆಗೆ ಕ್ರಮ

ರೂಪಾಂತರ ಕೊರೊನಾವೈರಸ್‌ ತಗುಲಿರುವುದು ದೃಢ

ಪಿಟಿಐ
Published 29 ಡಿಸೆಂಬರ್ 2020, 19:31 IST
Last Updated 29 ಡಿಸೆಂಬರ್ 2020, 19:31 IST
ಕೊರೊನಾ ವೈರಸ್‌(ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌(ಸಾಂದರ್ಭಿಕ ಚಿತ್ರ)   

ನವದೆಹಲಿ: ಬ್ರಿಟನ್‌ನಿಂದ ದೇಶಕ್ಕೆ ವಾಪಸ್ ಬಂದಿರುವ ಆರು ಜನರಲ್ಲಿ ರೂಪಾಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ರೂಪಾಂತರ ಕೊರೊನಾವೈರಸ್‌ನ ಸಂರಚನೆಯನ್ನು ಪತ್ತೆ ಮಾಡಲು ಸ್ಥಾಪಿಸಿರುವ ದೇಶದ 10 ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ.

ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ, ಮೂರರಲ್ಲಿ ರೂಪಾಂತರ ಕೊರೊನಾವೈರಸ್ ಪತ್ತೆಯಾಗಿದೆ.

ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ಎರಡು ಮತ್ತು ಪುಣೆಯ ಪ್ರಯೋಗಾಲಯದಲ್ಲಿ 1 ಮಾದರಿಯಲ್ಲಿ ರೂಪಾಂತರ ಕೊರೊನಾವೈರಸ್‌ ಇರುವುದು ಪತ್ತೆಯಾಗಿದೆ. ಈ ವೈರಸ್ ತಗುಲಿರುವ ಆರು ಮಂದಿಯನ್ನೂ ನಿಗದಿತ ಆಸ್ಪತ್ರೆಗಳ ಐಸೊಲೇಷನ್‌ ಘಟಕದಲ್ಲಿ ಇರಿಸಲಾಗಿದೆ. ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ADVERTISEMENT

ಈ ಕಾರಣದಿಂದ ಡಿಸೆಂಬರ್ 9ರಿಂದ 22ರವರೆಗಿನ ಅವಧಿಯಲ್ಲಿ ಬ್ರಿಟನ್‌ನಿಂದ ಮರಳಿದವರನ್ನು ಕಡ್ಡಾಯವಾಗಿ ರೂಪಾಂತರ ಕೊರೊನಾವೈರಸ್ ಸಂರಚನೆ ಪತ್ತೆ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.

‘ಈ ಅವಧಿಯಲ್ಲಿ ಭಾರತಕ್ಕೆ ಬಂದ ಎಲ್ಲಾ ಪ್ರಯಾಣಿಕರನ್ನು ವೈರಸ್ ಸಂರಚನೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು. ಇಂಥವರನ್ನು ಪತ್ತೆ ಮಾಡಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಬ್ರಿಟನ್‌ನಿಂದ ಬಂದವರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವ ಸಂಪೂರ್ಣ ಹೊಣೆ ಜಿಲ್ಲಾಡಳಿತಗಳದ್ದು.ಈ ಅವಧಿಯಲ್ಲಿ ಹಿಂತಿರುಗಿದವರಲ್ಲಿ ಕೋವಿಡ್‌ ಲಕ್ಷಣಗಳು ಇದ್ದರೂ, ಇರದಿದ್ದರೂ ಈ ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.

ನವೆಂಬರ್ 25ರಿಂದ ಡಿಸೆಂಬರ್ 23ರವರೆಗೆ ಬ್ರಿಟನ್‌ನಿಂದ ಭಾರತಕ್ಕೆ 33,000ಕ್ಕೂ ಹೆಚ್ಚು ಜನರು ಬಂದಿದ್ದಾರೆ. ಇವರಲ್ಲಿ ಕೆಲವೇ ಸಾವಿರ ಜನರನ್ನಷ್ಟೇ ಈವರೆಗೆ ಪತ್ತೆಮಾಡಿ, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 114 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಅಷ್ಟೂ ಜನರ ಗಂಟಲ ದ್ರವದ ಮಾದರಿಯನ್ನು ರೂಪಾಂತರ ಕೊರೊನಾವೈರಸ್ ಸಂರಚನೆ ಪತ್ತೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದರಲ್ಲಿ 6 ಜನರಿಗೆ ರೂಪಾಂತರ ಕೊರೊನಾವೈರಸ್ ತಗುಲಿರುವುದು ಪತ್ತೆಯಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಕೊರೊನಾ ಸೋಂಕು ಮತ್ತು ಬ್ರಿಟನ್‌ ರೂಪಾಂತರ ಸೋಂಕಿನ ಲಕ್ಷಣಗಳು ಒಂದೇ. ಆದರೆ, ಕೊರೊನಾ ಸೋಂಕಿಗಿಂತ ವೇಗವಾಗಿ ಇದು ಹರಡುತ್ತದೆ. ಆದರೆ, ರೋಗದ ತೀವ್ರತೆ ಕಡಿಮೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸೋಂಕಿತರಲ್ಲಿ ಕಂಡುಬರುವ ಲಕ್ಷಣಗಳು:

* ಪ್ರಾರಂಭದಲ್ಲಿ ಕೆಮ್ಮು, ನೆಗಡಿ, ಜ್ವರ ಕಂಡು ಬರುತ್ತದೆ

* ಅತಿಸಾರ ಅಥವಾ ಭೇದಿ ಶುರುವಾಗುತ್ತದೆ

* ರುಚಿ ಮತ್ತು ವಾಸನೆಯ ಅನುಭವ ಗೊತ್ತಾಗುವುದಿಲ್ಲ

* ಸೋಂಕಿತರ ಚರ್ಮದ ಮೇಲೆ ದದ್ದು ಅಥವಾ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ

* ಸೋಂಕಿನ ತೀವ್ರತೆ ಹೆಚ್ಚಾದಾಗ ಉಸಿರಾಟದ ಸಮಸ್ಯೆ

ಮುಂಜಾಗ್ರತಾ ಕ್ರಮಗಳೇನು ?

* ಅಂತರ ಪಾಲನೆ ಮುಖ್ಯ

* ನಿಯಮಿತವಾಗಿ ಕೈ ತೊಳೆಯಬೇಕು

* ಮುಖಗವಸು ಧರಿಸುವುದು ಕಡ್ಡಾಯ

* ಐದಾರು ತಿಂಗಳು ಇದೇ ವ್ಯವಸ್ಥೆ ಮುಂದುವರಿಯಬೇಕು

***

* ರೂಪಾಂತರ ಕೋವಿಡ್ ಪತ್ತೆಯಾಗಿರುವವರ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅವರ ಸಂಪರ್ಕಕ್ಕೆ ಬಂದಿರುವವರನ್ನೂ ರೂಪಾಂತರ ಕೊರೊನಾ ವೈರಸ್ ಸಂರಚನೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

* ಈ ಪರೀಕ್ಷೆಗಳ ಮೇಲ್ವಿಚಾರಣೆಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಡೆಸುತ್ತಿದೆ. ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ನೆರವು ಒದಗಿಸಲಿದೆ.

* ಬ್ರಿಟನ್‌ನಿಂದ ಬಂದವರನ್ನು ಪತ್ತೆ ಮಾಡುವ ಮತ್ತು ಅವರ ಸಂಪರ್ಕಕ್ಕೆ ಬಂದವರನ್ನುಪತ್ತೆ ಮಾಡುವ ಕಾರ್ಯವನ್ನು ಚುರುಕು
ಗೊಳಿಸಿ ಎಂದು ಕೋವಿಡ್‌ ನಿರ್ವಹಣೆಗೆ ರಚಿಸಿರುವ ರಾಷ್ಟ್ರೀಯ ಕಾರ್ಯಪಡೆ ಶಿಫಾರಸು ಮಾಡಿದೆ.

* ಬ್ರಿಟನ್‌ಗೆ ವಿಮಾನ ಸಂಚಾರ ಸ್ಥಗಿತ ವಿಸ್ತರಣೆಗೆ ಚಿಂತನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.