
ಲಖನೌ: ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೋಮವಾರ (ನ.22) ಲಖನೌ ನಗರದಲ್ಲಿ ‘ರೈತರ ಮಹಾಪಂಚಾಯತ್’ ನಡೆಸಲು ನಿರ್ಧರಿಸಿದೆ.
ನಗರದ ಇಕೊ ಗಾರ್ಡನ್‌ನಲ್ಲಿ ಈ ಮಹಾಪಂಚಾಯತ್ ನಡೆಯಲಿದೆ. ರೈತ ಸಂಘಟನೆಗಳು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಈ ಸಮಾವೇಶ ಆಯೋಜಿಸಿವೆ ಎಂದು ಮೂಲಗಳು ಹೇಳಿವೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಶುಕ್ರವಾರ ಘೋಷಿಸಿದರು. ಆದರೆ, ಇದಕ್ಕೂ ಕೆಲ ತಿಂಗಳ ಮೊದಲೇ ಈ ಸ್ಥಳದಲ್ಲಿ ಮಹಾಪಂಚಾಯತ್ ಆಯೋಜಿಸಲು ಎಸ್‌ಕೆಎಂ ತೀರ್ಮಾನಿಸಿತ್ತು ಎಂದು ಇವೇ ಮೂಲಗಳು ಹೇಳಿವೆ.
‘ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ರೂಪ ನೀಡಬೇಕು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು’ ಎಂದು ರೈತ ಮುಖಂಡರು ಹೇಳಿದ್ದಾರೆ.
ಲಖನೌದಲ್ಲಿ ನಡೆಯಲಿರುವ ಕಿಸಾನ್ ಮಹಾಪಂಚಾಯತ್ ಕುರಿತು ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು ಹಿಂದಿಯಲ್ಲಿ ಭಾನುವಾರ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.