ADVERTISEMENT

ಗಗನಮುಖಿ ವಿಮಾನ ಪ್ರಯಾಣ ದರ: ಸಂಸದರ ಕಳವಳ, ಕ್ರಮಕ್ಕೆ ಆಗ್ರಹ

ಪಿಟಿಐ
Published 22 ಜನವರಿ 2025, 13:16 IST
Last Updated 22 ಜನವರಿ 2025, 13:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ವಿಮಾನಯಾನ ದರಗಳು ಗಗನಮುಖಿ ಆಗಿವೆ’ ಎಂದು ತೀವ್ರವಾಗಿ ಆಕ್ಷೇಪಿಸಿರುವ ಹಲವು ಸಂಸದರು, ‘ಖಾಸಗಿ ವೈಮಾನಿಕ ಸಂಸ್ಥೆಗಳಿಗೆ ಉತ್ತರಾದಾಯಿತ್ವ ಇರಬೇಕು ಹಾಗೂ ಪ್ರಯಾಣಿಕರಿಗೆ ನಿರಾಳ ಎನ್ನಿಸುವ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಬುಧವಾರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಯಾ‌ಯಿತು. ‘ವಿಮಾನನಿಲ್ದಾಣ ಆರ್ಥಿಕತೆ ನಿಯಂತ್ರಣ ಪ್ರಾಧಿಕಾರವು (ಎಇಆರ್‌ಎ) ನಿಯಂತ್ರಣ ಸಂಸ್ಥೆಯಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ’ ಎಂದೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. 

ವಿಮಾನಯಾನ ದರ ಸೇರಿದಂತೆ ಹಲವು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಬೇಕಾಗಿದೆ ಎಂದೂ ಸಂಸದರು ಪಟ್ಟುಹಿಡಿದರು. ಬಿರುಸಿನ, ವಿಸ್ತೃತ ಚರ್ಚೆಗೆ ವೇದಿಕೆಯಾದ ಈ ಸಭೆಯನ್ನು, ಸಮಿತಿಯ ಅಧ್ಯಕ್ಷರೂ ಆದ ಕಾಂಗ್ರೆಸ್‌ ಮುಖಂಡ ಕೆ.ಸಿ.ವೇಣುಗೋಪಾಲ್ ಅವರು ‘ಅತ್ಯುತ್ತಮ ಸಭೆ’ ಎಂದು ಬಣ್ಣಿಸಿದ್ದಾರೆ. 

ADVERTISEMENT

ವೇಣುಗೋಪಾಲ್ ಅವರು, ‘ವಿಮಾನಯಾನ ದರಗಳು ಗಗನಮುಖಿ ಆಗಿವೆ. ನಾಗರಿಕ ವಿಮಾನಯಾನ ಇಲಖೆ ಮತ್ತು ವೈಮಾನಿಕ ಸೇವೆ ನಿರ್ದೇಶನಾಲಯ (ಡಿಜಿಸಿಎ) ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಹಲವು ಸದಸ್ಯರು ಕಳವಳ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.

ವಿಮಾನಯಾನ ದರ ನಿಯಂತ್ರಿಸಲು ಎಇಆರ್‌ಎ ಕಾಯ್ದೆಗೆ ತಿದ್ದುಪಡಿತರಬೇಕು ಎಂದು ಒತ್ತಾಯಿಸಿದ ಸದಸ್ಯರು, ಬಳಕೆದಾರ ಅಭಿವೃದ್ಧಿ ಶುಲ್ಕ, ಇತರೆ ದರಗಳನ್ನು ಮನಸೋಇಚ್ಛೆ ಏರಿಸಲಾಗುತ್ತಿದೆ. ಉತ್ತರದಾಯಿತ್ವ ನಿಗದಿಪಡಿಸುವಲ್ಲಿ ಹಾಲಿ ಇರುವ ವ್ಯವಸ್ಥೆ ವಿಫಲವಾಗಿದೆ ಎಂದು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.