ADVERTISEMENT

ಅಮುಲ್ ಸಹಿಸದ ಗುಲಾಮರಿಗೆ ಇಟಲಿಯನ್ನರ ಆಳ್ವಿಕೆಯಲ್ಲಿ ತೊಂದರೆಯಿಲ್ಲ: ಸಿ.ಟಿ.ರವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಏಪ್ರಿಲ್ 2023, 14:35 IST
Last Updated 8 ಏಪ್ರಿಲ್ 2023, 14:35 IST
ಸಿ.ಟಿ. ರವಿ
ಸಿ.ಟಿ. ರವಿ   

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಬೆಂಗಳೂರಿನ ಮಾರುಕಟ್ಟೆಗೆ ಹಾಲು ಮತ್ತು ಮೊಸರನ್ನು ಸರಬರಾಜು ಮುಂದಾಗಿರುವ ಗುಜರಾತ್‌ ಮೂಲದ 'ಅಮುಲ್‌' ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ.

'ಇಟಲಿಯನ್ನರ ಆಳ್ವಿಕೆಯಲ್ಲಿ ಗುಲಾಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಬೇರೆ ಬ್ರ್ಯಾಂಡ್‌ಗಳಂತೆಯೇ ಭಾರತದ ಬ್ರ್ಯಾಂಡ್‌ ಆದ ಅಮುಲ್‌ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ ಅವರಿಗೆ ತೊಂದರೆಯಾಗುತ್ತದೆ. ಎಂಥಾ ಸೋತವರ ಗುಂಪಿದು!' ಎಂದು ಬರೆದುಕೊಂಡಿದ್ದಾರೆ.

ಐಸ್‌ಕ್ರೀಮ್ ಸೇರಿ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಗುಜರಾತ್‌ ಮೂಲದ ಅಮುಲ್, ಈಗ ಹಾಲು ಮತ್ತು ಮೊಸರನ್ನು ಮಾರುಕಟ್ಟೆಗೂ ಕಾಲಿಡಲು ಮುಂದಾಗಿದೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಬಿಜೆಪಿಯ ದುರ್ಬಲ ನಾಯಕತ್ವದಿಂದಾಗಿ ಕೆಎಂಎಫ್‌ ಅನ್ನು ಬಲಿಪಡೆಯುವ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ತಿರುಗೇಟು ನೀಡಲು ಸಿ.ಟಿ. ರವಿ ಟ್ವೀಟ್ ಮಾಡಿದ್ದಾರೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನೆಟ್ಟಿಗರು ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಮುಲ್‌ ಭಾರತೀಯ ಬ್ರ್ಯಾಂಡ್‌ ಆದರೆ, ನಂದಿನಿ ವಿದೇಶದ್ದೇ? ಹಿಂದಿ ಭಾರತದ ಭಾಷೆಯಾದರೆ, ಕನ್ನಡ ವಿದೇಶಿ ಭಾಷೆಯೇ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.