ADVERTISEMENT

’ಹಿಂದೂ ಉಗ್ರ ಗೋಡ್ಸೆ’ ಹೇಳಿಕೆಗೆ ಆಕ್ರೋಶ; ಕಮಲ್‌ ವಿರುದ್ಧ ಚಪ್ಪಲಿ ಎಸೆತ

ವಿಧಾನಸಭೆ ಉಪಚುನಾವಣೆ

ಏಜೆನ್ಸೀಸ್
Published 16 ಮೇ 2019, 5:32 IST
Last Updated 16 ಮೇ 2019, 5:32 IST
   

ಚೆನ್ನೈ: ವಿಧಾನಸಭೆ ಉಪಚುನಾವಣೆ ಪ್ರಚಾರದಲ್ಲಿರುವ ನಟ–ರಾಜಕಾರಣಿ ಕಮಲ್‌ ಹಾಸನ್‌ ಮೇಲೆ ಬುಧವಾರ ಚಪ್ಪಲಿಗಳನ್ನುತೂರಲಾಗಿದೆ. ಅವರು ಮಧುರೈನ ತಿರುಪ್ಪರನ್‌ಕುಂದ್ರಮ್‌ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.

’ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ಆತ ನಾಥುರಾಂ ಗೋಡ್ಸೆ’ ಎಂದು ಚುನಾವಣಾ ಪ್ರಚಾರದಲ್ಲಿ ಕಮಲ್‌ ಹಾಸನ್‌ ಹೇಳಿದ್ದರು. ಅವರ ಮಾತು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು ಹಾಗೂ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಾಗಿ ಮೂರುಗಳ ನಂತರ ಕಮಲ್ ಹಾಸನ್‌ ಮೇಲೆ ಚಪ್ಪಲಿಗಳನ್ನು ಎಸೆಯಲಾಗಿದೆ.

ಹನುಮಾನ್‌ ಸೇನೆ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಾಗಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಜನರನ್ನು ಉದ್ದೇಶಿ ಮಾತನಾಡುತ್ತಿದ್ದಾಗ ಗುಂಪಿನಿಂದ ಚಪ್ಪಲಿಗಳನ್ನು ಎಸೆಯಲಾಗಿದ್ದು, ಅವು ವೇದಿಕೆಯ ಕಡೆಗೆ ತೂರಿ ಬಂದಿವೆ. ಕಮಲ್‌ ಹಾಸನ್‌ ಅವರಿಗೆ ಚಪ್ಪಲಿಗಳು ತಗುಲಿಲ್ಲ, ಗುಂಪಿನತ್ತಲೇ ಬಿದ್ದಿವೆ ಎಂದು ಪೊಲೀಸರು ಹೇಳಿದ್ದಾರೆ.

ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆ ಮಾಡಿದ ನಾಥುರಾಮ್‌ ಗೋಡ್ಸೆಯೇ ಮೊದಲ ಭಯೋತ್ಪಾದಕ’ ಎಂದು ಮಕ್ಕಳ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್‌ ಹಾಸನ್‌ ಹೇಳಿದ್ದರು. ಅರವಕುರುಚ್ಚಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಪ್ರಚಾರಸಭೆಯಲ್ಲಿ ಸೋಮವಾರ ಮಾತನಾಡಿದ್ದರು.

ಈ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ತಮಿಳ್‌ಸಾಯಿ ಸೌಂದರರಾಜನ್‌ ಖಂಡಿಸಿ, ‘ಸೈದ್ಧಾಂತಿಕ ಮತ್ತು ಶಿಸ್ತುಬದ್ಧ ಜೀವನ ನಡೆಸಿದ್ದ ಗಾಂಧೀಜಿಯ ಬಗ್ಗೆ ಮಾತನಾಡುವ ನೈತಿಕತೆ ಕಮಲ್‌ಹಾಸನ್‌ ಅವರಿಗಿಲ್ಲ. ಎರಡು ಧರ್ಮಗಳ ನಡುವೆ ವೈರತ್ವ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು’ ಎಂದಿದ್ದರು.

ತಮಿಳುನಾಡಿನ ಸಚಿವ, ಎಐಎಡಿಎಂಕೆಯಕೆ.ಟಿ.ರಾಜೇಂದ್ರ ಬಾಲಾಜಿ ಅವರು ’ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂಬ ಹೇಳಿಕೆ ನೀಡಿರುವ ಕಮಲ್‌ ಹಾಸನ್‌ ಅವರ ನಾಲಿಗೆ ಕತ್ತರಿಸಬೇಕು, ಎಂಎನ್‌ಎಂ ಪಕ್ಷವನ್ನು ನಿಷೇಧಿಸಬೇಕು’ ಎಂದು ಪ್ರತಿಕ್ರಿಯಿಸಿದ್ದರು.

ಅರವಕುರಿಚಿ ಮತ್ತು ತಿರುಪ್ಪರನ್‌ಕುಂದ್ರಮ್‌ ಸೇರಿದಂತೆ ತಮಿಳುನಾಡಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ(ಮೇ 19) ಮತದಾನ ನಡೆಯಲಿದೆ. ಎಂಎನ್‌ಎಂ ಇದೇ ಮೊದಲ ಬಾರಿಗೆ ತನ್ನ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕಿಳಿಸಿದೆ.

ಹಿಂದೂ ಉಗ್ರ ಎಂದು ಕಮಲ್‌ ನೀಡಿರುವ ಹೇಳಿಕೆಗಳ ಸಂಬಂಧ ಅರವಕುರಿಚಿಯಲ್ಲಿ ಸೋಮವಾರ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.

ತನ್ನ ಮಾತುಗಳನ್ನು ಕಮಲ್‌ ಹಾಸನ್‌ ಬುಧವಾರ ಸಮರ್ಥಿಸಿಕೊಂಡಿದ್ದಾರೆ. ’ನಾನು ಕೇವಲ ದಾಖಲಾಗಿರುವ ಸತ್ಯಗಳನ್ನಷ್ಟೇ ಪ್ರಸ್ತತ ಪಡಿಸಿದೆ. ನಾನು ಹೇಳಿದ್ದು ಐತಿಹಾಸ ಸತ್ಯವನ್ನು. ನಾನು ಒಂದು ಮತವನ್ನು ಹೇಗೆ ಗುರಿಯಾಗಿಸಿಕೊಳ್ಳಲಿ?’ ಎಂದಿದ್ದರು. ನಾಥೂರಾಮ್‌ ಗೋಡ್ಸೆ ಬಗ್ಗೆ ಮಾತನಾಡಿದ್ದೆ, ಒಟ್ಟಾರೆ ಹಿಂದೂ ಸಮುದಾಯದ ಕುರಿತಾಗಿ ಅಲ್ಲ ಎನ್ನುವ ಮೂಲಕ ಮದ್ರಾಸ್‌ ಹೈ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ.

ಕಮಲ್‌ ಹಾಸನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅವರು ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ಇದು ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ’ ಎಂದಿದ್ದ ಕೋರ್ಟ್‌, ಅವರ ಹೇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಬುಧವಾರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.