
ನವದೆಹಲಿ: 2016ರಲ್ಲಿ ದೇಶದಾದ್ಯಂತ ‘ಸ್ಮಾರ್ಟ್ ಸಿಟಿ’ ಅಡಿ ಆಯ್ಕೆ ಮಾಡಿಕೊಂಡ 100 ನಗರಗಳ ಪೈಕಿ ಕರ್ನಾಟಕದ ಶಿವಮೊಗ್ಗ, ತುಮಕೂರು ಸೇರಿದಂತೆ 43 ನಗರಗಳಲ್ಲಿ ಯೋಜನೆಗಳು ಪೂರ್ಣಗೊಂಡಿವೆ.
‘ಆರಂಭದಲ್ಲಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಪೂರ್ಣಗೊಳಿಸಲು ಐದು ವರ್ಷಗಳ ಗಡುವು ನಿಗದಿಪಡಿಸಿದ್ದು, ನಂತರ ಮೂರು ಸಲ ಗಡುವು ವಿಸ್ತರಿಸಲಾಗಿತ್ತು’ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ (ಆರ್‌ಟಿಐ) ಕೇಳಿದ ಮಾಹಿತಿಗೆ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
‘ಸ್ಮಾರ್ಟ್ ಸಿಟಿ ಮಿಷನ್ ಯೋಜನೆ’ಯು ಜನರ ಜೀವನ ಮಟ್ಟ ಸುಧಾರಣೆ ಮಾಡುವ ಗುರಿ ಹೊಂದಿತ್ತು. ಜನರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸುವ ಜೊತೆಗೆ ಗುಣಮಟ್ಟದ ಮೂಲಸೌಕರ್ಯ, ಸುಸ್ಥಿರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ನಾಲ್ಕು ಹಂತದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ.
2016ರ ಜನವರಿಯಲ್ಲಿ ಮೊದಲ ಹಂತದಲ್ಲಿ 20 ನಗರಗಳನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ 2ನೇ ಹಂತದಲ್ಲಿ 40 ನಗರ ಹಾಗೂ 2017ರ ಜೂನ್‌ನಲ್ಲಿ ಮೂರನೇ ಹಂತದಲ್ಲಿ 30 ನಗರಗಳು ಹಾಗೂ 2018ರಲ್ಲಿ ನಾಲ್ಕನೇ ಹಂತದಲ್ಲಿ 10 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಆರಂಭದಲ್ಲಿ 2023ರ ಜೂನ್ ತಿಂಗಳವರೆಗೆ ಗಡುವು ವಿಸ್ತರಿಸಲಾಗಿತ್ತು. ನಂತರ 2024ರ ಜೂನ್ 30 ಹಾಗೂ 2025ರ ಮಾರ್ಚ್ 31ರಂದು ಮತ್ತೊಂದು ಸಲ ವಿಸ್ತರಣೆ ಮಾಡಲಾಗಿತ್ತು.
ಈ ಕುರಿತು ಆರ್‌ಟಿಐನಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯವು, 2025ರ ಡಿಸೆಂಬರ್‌ವರೆಗೆ ₹59,385 ಕೋಟಿ ವೆಚ್ಚದಲ್ಲಿ 31 ನಗರಗಳಲ್ಲಿ ಕಾಮಗಾರಿ ಪೂರ್ಣಗೊಂಡಿವೆ. 26 ನಗರಗಳಲ್ಲಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
ಸ್ಪಷ್ಟನೆ: ಸ್ಮಾರ್ಟ್ ಸಿಟಿ ಅಡಿಯಲ್ಲಿ ಇಡೀ ನಗರವನ್ನೇ ಅಭಿವೃದ್ಧಿಪಡಿಸುವ ಗುರಿ ಹೊಂದಿರಲಿಲ್ಲ. ಬದಲಾಗಿ, ನಿರ್ದಿಷ್ಟ ಸ್ಥಳಕ್ಕೆ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಇದರಡಿ ಮರು ಅಭಿವೃದ್ಧಿ ಹಾಗೂ ಹಸಿರು ಪ್ರದೇಶ ವಿಸ್ತರಣೆ ಮಾಡಲಾಗಿತ್ತು. ಹಳೆಯ ಕಟ್ಟಡಗಳನ್ನು ಉಳಿಸಿಕೊಂಡೇ, ಆಧುನಿಕ ಸೌಕರ್ಯಗಳನ್ನು ಅಳವಡಿಸಲಾಗಿತ್ತು. ಆ ಮೂಲಕ ಈ ಮಾದರಿಯನ್ನು ಇತರೆ ನಗರಗಳು ಕೂಡ ಅಳವಡಿಸಿಕೊಂಡಿದ್ದವು ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
2025ರ ಜೂನ್ ತಿಂಗಳ ತನಕ 100 ನಗರಗಳಲ್ಲಿ ₹1.64 ಲಕ್ಷ ಕೋಟಿ ವೆಚ್ಚದಲ್ಲಿ 8,067 ಯೋಜನೆಗಳು (ಒಟ್ಟು ಯೋಜನೆಗಳಲ್ಲಿ ಶೇಕಡಾ 94) ಪೂರ್ಣಗೊಂಡಿವೆ.
ಆರ್‌ಟಿಐ ಪ್ರಕಾರ, ಶಿವಮೊಗ್ಗ (112), ತುಮಕೂರು (217) ವಾರಾಣಸಿ (117) ಸೇರಿದಂತೆ ಹಲವು ನಗರಗಳಲ್ಲಿ ಗರಿಷ್ಠ ಯೋಜನೆಗಳು ಪೂರ್ಣಗೊಂಡಿವೆ.
ಮುಕ್ತಾಯ ಹಂತದಲ್ಲಿರುವ ನಗರಗಳ ಪೈಕಿ ಬೆಂಗಳೂರು (1), ದಾವಣಗೆರೆ (1), ಹುಬ್ಬಳ್ಳಿ–ಧಾರವಾಡ (2) ಸೇರಿದಂತೆ 43 ನಗರಗಳಲ್ಲಿ ಹಲವು ಯೋಜನೆಗಳು ಕೊನೆಯ ಹಂತದಲ್ಲಿವೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.