ಬೆಸ್ಕಾಂ ಸಿಬ್ಬಂದಿಯೊಬ್ಬರು ಡಿಜಿಟಲ್ ಮೀಟರ್ ಅಳವಡಿಸುತ್ತಿರುವ ದೃಶ್ಯ (ಪ್ರಾತಿನಿಧಿಕ ಚಿತ್ರ)
ಕೋಲ್ಕತ್ತ: ಜನರ ವಿರೋಧದ ಬಳಿಕ ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಈಗಾಗಲೇ ಸ್ಮಾರ್ಟ್ ಮೀಟರ್ ಅಳವಡಿಕೆಯಾಗಿರುವುದನ್ನು ಸಾಮಾನ್ಯ ಮೀಟರ್‌ನಂತೆ ಪರಿಗಣಿಸಲಾಗುವುದು. ಅದರ ಬಳಕೆದಾರರು ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಇಂಧನ ಸಚಿವ ಅರುಪ್ ಬಿಸ್ವಾಸ್ ಬುಧವಾರ ತಿಳಿಸಿದ್ದಾರೆ.
ಸ್ಮಾರ್ಟ್ ಮೀಟರ್ ಅಳವಡಿಕೆ ನಿರ್ಧಾರ ನೇರವಾಗಿ ಕೇಂದ್ರ ಸರ್ಕಾರದ್ದು ಎಂದು ಸಚಿವರು ಆರೋಪಿಸಿದ್ದು, ದೇಶದ ಜನರ ಮೇಲೆ ಒತ್ತಾಯಪೂರ್ವಕವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಯನ್ನು ಹೇರಲಾಗುತ್ತಿದೆ. ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
ಸ್ಮಾರ್ಟ್ ಮೀಟರ್ ಅಳವಡಿಕೆಗೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದ್ದು, ಹೌರಾ. 24 ಪರಗಣ ಜಿಲ್ಲೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆದ ಕಾರಣ ಸೋಮವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಯೋಜನೆಯ ಸ್ಥಗಿತಕ್ಕೆ ಆದೇಶಿಸಿದ್ದರು.
ಸಿಎಂ ಆದೇಶದ ಬಳಿಕ ರಾಜ್ಯ ಇಂಧನ ಸಚಿವಾಲಯ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.