ADVERTISEMENT

ದೆಹಲಿಯಲ್ಲಿ ದಟ್ಟ ಹೊಗೆ: ಅಪಾಯಕಾರಿ ಮಟ್ಟಕ್ಕೆ ವಾಯು ಗುಣಮಟ್ಟ

ಪಿಟಿಐ
Published 12 ನವೆಂಬರ್ 2021, 13:55 IST
Last Updated 12 ನವೆಂಬರ್ 2021, 13:55 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಹವಾಗುಣ ಶುಕ್ರವಾರ ಮತ್ತಷ್ಟು ಹದಗೆಟ್ಟಿದೆ. ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ನವೆಂಬರ್ ತಿಂಗಳ ಆರಂಭದಲ್ಲೇ ಅತ್ಯಂತ ಕೆಟ್ಟ ಹವಾಗುಣ ದಾಖಲಾಗಿದೆ. ದೃಷ್ಟಿ ಗೋಚರ ಮಟ್ಟ 200 ಮೀಟರ್‌ಗೆ ಕುಸಿದಿದೆ.

ವಾಯುಗುಣಮಟ್ಟ ಸೂಚ್ಯಂಕ(ಎಕ್ಯುಐ) 471ಕ್ಕೆ ಕುಸಿದಿದೆ.

4,000 ಸಾವಿರಕ್ಕೂ ಹೆಚ್ಚು ಗದ್ದೆಗಳ ಕೃಷಿ ತ್ಯಾಜ್ಯ ಸುಡುವಿಕೆಯ ಪರಿಣಾಮ ಶುಕ್ರವಾರ ದೆಹಲಿಯ ಶೇಕಡಾ 35ರಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ. ಈ ಮೂಲಕ 24 ಗಂಟೆಗಳ ಸರಾಸರಿ ಎಕ್ಯುಐ ಸಂಜೆ 4ಗಂಟೆ ಸುಮಾರಿಗೆ 471ಕ್ಕೆ ಮುಟ್ಟಿದೆ. ಇದು ಈ ಋತುವಿನಲ್ಲಿ ದಾಖಲಾದ ಅತ್ಯಂತ ಕಳಪೆ ವಾಯುಗುಣಮಟ್ಟವಾಗಿದೆ. ಗುರುವಾರ ಇದು 411ರಷ್ಟಿತ್ತು.

ದೀಪಾವಳಿ ಬಳಿಕ ಕಳೆದ 8 ದಿನಗಳ ಪೈಕಿ 6 ದಿನ ನವದೆಹಲಿಯ ವಾಯುಗುಣಮಟ್ಟ ಅತ್ಯಂತ ಕಳಪೆಯಾಗಿದೆ.

ADVERTISEMENT

ನವೆಂಬರ್ 1ರಿಂದ 15ರವರೆಗೆ ದೆಹಲಿಯ ಜನ ಅತ್ಯಂತ ಕಳಪೆ ಗಾಳಿಯನ್ನು ಉಸಿರಾಡುತ್ತಾರೆ ಎಂದು ದೆಹಲಿಯ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಸಮಿತಿ(ಡಿಪಿಸಿಸಿ) ಹೇಳಿದೆ.

ಫರಿದಾಬಾದ್ (460), ಗಾಜಿಯಾಬಾದ್ (486), ಗ್ರೇಟರ್ ನೋಯ್ಡಾ (478), ಗುರುಗ್ರಾಮ (448) ಮತ್ತು ನೋಯ್ಡಾ (488) ದಲ್ಲೂ ಗಾಳಿ ಗುಣಮಟ್ಟ ಅತ್ಯಂತ ಕಳಪೆಯಾಗಿದೆ.

ಶೂನ್ಯದಿಂದ 50ರವರೆಗಿನ ವಾಯುಗುಣಮಟ್ಟ ಸೂಚ್ಯಂಕ(ಎಕ್ಯೂಐ) ಆರೋಗ್ಯಕ್ಕೆ ಉತ್ತಮ, 51 ರಿಂದ 100ರವರೆಗೆ ತೃಪ್ತಿಕರ, 101ರಿಂದ 200ರವರೆಗೆ ಸಾಧಾರಣ ಹಾಗೂ 201ರಿಂದ 300ರವರೆಗೆ ಕಳಪೆ ಎಂದು ಗುರ್ತಿಸಲಾಗಿದೆ. 301ರಿಂದ 400ರವರೆಗೆ ಅತ್ಯಂತ ಕಳಪೆ, 401ರಿಂದ 500ರವರೆಗೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಸಮಿತಿಯ ಪ್ರಕಾರ, ಶ್ವಾಸಕೋಶಕ್ಕೆ ಹಾನಿಮಾಡುವ ಪಿಎಂ2.5 ಎಂದು ಕರೆಯಲಾಗುವ ಧೂಳಿನ ಕಣಗಳ ಪ್ರಮಾಣ ಮಧ್ಯರಾತ್ರಿ ದೆಹಲಿ–ಎನ್‌ಸಿಆರ್‌ನಲ್ಲಿ ಪ್ರತೀ ಕ್ಯುಬಿಕ್ ಮೀಟರ್‌ಗೆ 300 ಮೈಕ್ರೋಗ್ರಾಂನ ಗಡಿ ದಾಟಿದೆ. ಶುಕ್ರವಾರ 4 ಗಂಟೆ ವೇಳೆಗೆ 381 ಮೈಕ್ರೋಗ್ರಾಂನಷ್ಟಾಗಿತ್ತು. ಅಂದರೆ, ಸುರಕ್ಷಿತ ಮಟ್ಟವಾದ 60 ಮೈಕ್ರೋಗ್ರಾಂಗಿಂತ ಆರು ಪಟ್ಟು ಹೆಚ್ಚಿದೆ.

ಮಾಲಿನ್ಯದ ಜೊತೆ ಚಳಿಗಾಲದ ಮಂಜು ಕವಿದಿರುವ ಪರಿಣಾಮ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೃಷ್ಟಿ ಗೋಚರ ಮಟ್ಟ 200 ಮೀಟರ್‌ಗೆ ಕುಸಿದಿದೆ.

ಸದ್ಯ ದೆಹಲಿಯಲ್ಲಿ ನಿರ್ಮಾಣವಾಗಿರುವ ಮಾಲಿನ್ಯದ ಪರಿಸ್ಥಿತಿಯು 4 ವರ್ಷಗಳಲ್ಲೇ ಅತ್ಯಂತ ದೀರ್ಘವಾಗಿರಲಿದೆ ಎಂದು ಪರಿಸರ ಮತ್ತು ವಿಜ್ಞಾನದಲ್ಲಿ ಹಸಿರು ಚಿಂತಕರ ಚಾವಡಿ(ಸಿಎಸ್‌ಇ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.