ADVERTISEMENT

PM Modi Mann Ki Baat Highlights: ಪ್ರಧಾನಿ ಮೋದಿ ‘ಮನದ ಮಾತು’ ಮುಖ್ಯಾಂಶಗಳು

‘ಮನದ ಮಾತು’: ಸಾಮಾಜಿಕ ಭದ್ರತಾ ಯೋಜನೆ ಯಶಸ್ಸಿನ ಬಗ್ಗೆ ಪ್ರಧಾನಿ ಶ್ಲಾಘನೆ

ಪಿಟಿಐ
Published 29 ಜೂನ್ 2025, 14:14 IST
Last Updated 29 ಜೂನ್ 2025, 14:14 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ದೇಶದ ಸುಮಾರು 95 ಕೋಟಿ ಜನರು ಈಗ ಒಂದಲ್ಲ ಒಂದು ರೀತಿಯ ಸಾಮಾಜಿಕ ಭದ್ರತಾ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಮನದ ಮಾತು’ ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, 2015ರವರೆಗೆ ಸರ್ಕಾರಿ ಯೋಜನೆಗಳು 25 ಕೋಟಿಗೂ ಕಡಿಮೆ ಮಂದಿಗೆ ತಲುಪುತ್ತಿದ್ದವು ಎಂದಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಈಚೆಗಿನ ವರದಿಯನ್ನು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರಸ್ತುತ, ಭಾರತದ ಹೆಚ್ಚಿನ ಜನರು ಒಂದಲ್ಲ ಒಂದು ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿ ಆಗಿದ್ದಾರೆ. ದೇಶದ ಜನಸಂಖ್ಯೆಯ ಶೇ 64ಕ್ಕಿಂತ ಅಧಿಕ ಮಂದಿ ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಐಎಲ್‌ಒ ವರದಿ ತಿಳಿಸಿದೆ’ ಎಂದಿದ್ದಾರೆ.

ADVERTISEMENT

ಆರೋಗ್ಯ ಕ್ಷೇತ್ರದಿಂದ ಹಿಡಿದು ಸಾಮಾಜಿಕ ಭದ್ರತೆಯವರೆಗೆ, ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪರಿಪೂರ್ಣತೆಯೆಡೆಗೆ ಮುಂದುವರಿಯುತ್ತಿದೆ ಎಂದು ತಿಳಿಸಿದರು.

‘ಇದು ಸಾಮಾಜಿಕ ನ್ಯಾಯದ ಒಂದು ಉತ್ತಮ ಚಿತ್ರಣವೂ ಆಗಿದೆ. ಈಗ ಸಾಧಿಸಿರುವ ಯಶಸ್ಸು, ಭವಿಷ್ಯದ ದಿನಗಳು ಇನ್ನೂ ಉತ್ತಮವಾಗಿರುತ್ತವೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ’ ಎಂದು ಪ್ರತಿಪಾದಿಸಿದರು.

ಟ್ರಾಕೋಮಾ ಮುಕ್ತ: ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಭಾರತವನ್ನು ಟ್ರಾಕೋಮಾ ಮುಕ್ತ ಎಂದು ಘೋಷಿಸಿದ್ದನ್ನು ಪ್ರಧಾನಿ ‘ಮಹತ್ವದ ಮೈಲಿಗಲ್ಲು’ ಎಂದರಲ್ಲದೆ, ಇದಕ್ಕೆ ಕಾರಣರಾದ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದರು.

ಟ್ರಾಕೋಮಾ ಬ್ಯಾಕ್ಟೀರಿಯಾದ ಸೋಂಕು ಆಗಿದ್ದು, ಅದು ಕಣ್ಣಿನ ರೆಪ್ಪೆಗಳ ಒಳ ಪದರದ ಮೇಲೆ ಪರಿಣಾಮ ಬೀರುತ್ತದೆ. ಇದು ಒಂದು ಕಾಲದಲ್ಲಿ ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿತ್ತು.

‘ಸ್ವಚ್ಛ ಭಾರತ ಅಭಿಯಾನ’ವು ಈ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ನೆರವಾಯಿತು. ‘ಜಲ ಜೀವನ್ ಮಿಷನ್’ ಕೂಡ ಇದರ ಯಶಸ್ಸಿಗೆ ಬಹಳಷ್ಟು ಕೊಡುಗೆ ನೀಡಿದೆ. ಇಂದು ನಲ್ಲಿಗಳ ಮೂಲಕ ಶುದ್ಧ ನೀರು ಪ್ರತಿ ಮನೆಗೆ ತಲುಪುತ್ತಿರುವುದರಿಂದ ಇಂತಹ ಕಾಯಿಲೆಗಳು ಹರಡುವ ಅಪಾಯ ಕಡಿಮೆಯಾಗಿದೆ’ ಎಂದರು.

‘ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ಸ್ಮರಿಸಬೇಕು’ 

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ಯಾವಾಗಲೂ ಸ್ಮರಿಸಬೇಕು. ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ಜನರು ಎಚ್ಚರದಿಂದಿರಲು ಇದು ಪ್ರೇರೇಪಿಸುತ್ತದೆ’ ಎಂದು ಮೋದಿ ಹೇಳಿದರು. ತುರ್ತು ಪರಿಸ್ಥಿತಿಯನ್ನು ಹೇರಿದವರು ಸಂವಿಧಾನವನ್ನು ಕೊಲೆ ಮಾಡಿದ್ದಲ್ಲದೆ ನ್ಯಾಯಾಂಗವನ್ನೂ ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದರು ಎಂದು ಟೀಕಿಸಿದರು. ಮಾಜಿ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮಾಜಿ ಉಪ ಪ್ರಧಾನಿ ಜಗಜೀವನ್‌ ರಾಮ್ ಅವರು ತುರ್ತು ಪರಿಸ್ಥಿತಿ ಬಗ್ಗೆ ಆಡಿದ್ದ ಮಾತುಗಳ ಆಡಿಯೊ ತುಣುಕುಗಳನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.

‘ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ’

* ಕೈಲಾಸ ಮಾನಸ ಸರೋವರ ಯಾತ್ರೆ ಮತ್ತು ಅಮರನಾಥ ಯಾತ್ರೆಗೆ ತೆರಳುವ ಭಕ್ತರಿಗೆ ಪ್ರಧಾನಿ ಅವರು ಶುಭ ಕೋರಿದರು.

*  ಬೊಜ್ಜಿನ ವಿರುದ್ಧ ಹೋರಾಡಲು ಅಡುಗೆ ಎಣ್ಣೆ ಬಳಕೆಯ ಪ್ರಮಾಣವನ್ನು ಶೇಕಡ 10ರಷ್ಟು ಕಡಿತ ಮಾಡುವಂತೆ ಪ್ರಧಾನಿ ಅವರು ಜನರಲ್ಲಿ ಮತ್ತೊಮ್ಮೆ ಕೋರಿದ್ದಾರೆ.

* ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.