ಸೋನಮ್
ಶಿಲ್ಲಾಂಗ್: ರಾಜ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ನಾಪತ್ತೆಯಾಗುವ ಮೊದಲು ತಮ್ಮ ಸೂಟ್‌ಕೇಸ್ ಅನ್ನು ಸೊಹ್ರಾದಲ್ಲಿನ ಹೋಂಸ್ಟೇಯಲ್ಲಿ ಬಿಟ್ಟು ಹೋಗಿದ್ದರು. ಅದರಲ್ಲಿದ್ದ 'ಮಂಗಳಸೂತ್ರ' ಮತ್ತು 'ಉಂಗುರ' ಹನಿಮೂನ್ ಹತ್ಯೆ ಪ್ರಕರಣವನ್ನು ಭೇದಿಸಲು ತನಿಖಾಧಿಕಾರಿಗಳಿಗೆ ನೆರವಾಗಿದೆ ಎಂದು ಮೇಘಾಲಯದ ಪೊಲೀಸ್ ಮಹಾನಿರ್ದೇಶಕ ( ಡಿಜಿಪಿ ) ಐ. ನಾನ್ರಾಂಗ್ ಬುಧವಾರ ತಿಳಿಸಿದ್ದಾರೆ.
ಇಂದೋರ್‌ನ ಸಾರಿಗೆ ಉದ್ಯಮಿ ರಾಜ ರಘುವಂಶಿ, ಸೋನಮ್ ಅವರನ್ನು ಮೇ 11ರಂದು ವಿವಾಹವಾಗಿದ್ದರು. ಮೇ 20 ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ದಂಪತಿ ನಾಪತ್ತೆಯಾಗಿದ್ದರು. ಜೂನ್ 2ರಂದು ರಘುವಂಶಿ ಅವರ ಶವ ಶಿಲ್ಲಾಂಗ್ ಸಮೀಪದ ಜಲಪಾತದ ಕಮರಿಯಲ್ಲಿ ಪತ್ತೆಯಾಗಿತ್ತು. ಸೋನಮ್‌ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದರು.
ಜೂನ್ 9ರಂದು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಉತ್ತರ ಪ್ರದೇಶದ ಗಾಜಿಪುರದ ನಂದಗಂಜ್ ಪೊಲೀಸ್ ಠಾಣೆಯಲ್ಲಿ ರಾಜ ರಘುವಂಶಿ ಪತ್ನಿ ಸೋನಮ್ ಶರಣಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು ಸೋನಮ್ (25), ಆಕಾಶ್ ರಜಪೂತ್ (19), ವಿಶಾಲ್ ಸಿಂಗ್ ಚೌಹಾಣ್ (22) ಮತ್ತು ರಾಜ್ ಸಿಂಗ್ ಕುಶ್ವಾಹ (21) ಎಂಬುವವರನ್ನು ಬಂಧಿಸಿದ್ದರು. ಪತಿಯನ್ನು ಕೊಲ್ಲುವಂತೆ ಸೋನಮ್ ಸುಪಾರಿ ನೀಡಿದ್ದಳು ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ನಾನ್ರಾಂಗ್ ತಿಳಿಸಿದ್ದರು.
ಸೋಹ್ರಾದ ಹೋಂಸ್ಟೇಯಲ್ಲಿ ದಂಪತಿ ಬಿಟ್ಟು ಹೋಗಿದ್ದ ಸೂಟ್‌ಕೇಸ್‌ನಿಂದ ನಾವು ಸೋನಮ್ ಅವರ ' ಮಂಗಳಸೂತ್ರ ಮತ್ತು ಉಂಗುರವನ್ನು ವಶಪಡಿಸಿಕೊಂಡಿದ್ದೇವೆ. ಹಿಂದೂ ಸಾಂಪ್ರದಾಯಿಕ ವಿವಾಹಗಳಲ್ಲಿ, ಮಂಗಳಸೂತ್ರವು, ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಸ್ಥಾನಮಾನದ ಸಂಕೇತವಾಗಿ ಧರಿಸುವ ಪವಿತ್ರ ದಾರವಾಗಿದೆ. ಇದು ಕೇವಲ ಆಭರಣವಲ್ಲ ಆದರೆ ಇದು ದಂಪತಿಗಳ ನಡುವಿನ ಬಂಧವನ್ನು ಸಂಕೇತಿಸುತ್ತದೆ. ಪ್ರಕರಣದಲ್ಲಿ ವಿವಾಹಿತ ಮಹಿಳೆ ಆಭರಣಗಳನ್ನು ಬಿಟ್ಟು ಹೋಗಿರುವುದು ನಮ್ಮ ಅನುಮಾನಕ್ಕೆ ಕಾರಣವಾಯಿತು ಎಂದು ಡಿಜಿಪಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿಲ್ಲಾಂಗ್ ನ್ಯಾಯಾಲಯವು 8 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.