ADVERTISEMENT

ಝೆನ್‌–ಜಿ ಪ್ರಚೋದನೆಗೆ ಗಾಂಧಿ ಭಾಷಣ ಬಳಕೆ: ವಾಂಗ್ಚೂಕ್ ವಿರುದ್ಧ ಕೇಂದ್ರದ ವಾದ

ಪಿಟಿಐ
Published 2 ಫೆಬ್ರುವರಿ 2026, 15:53 IST
Last Updated 2 ಫೆಬ್ರುವರಿ 2026, 15:53 IST
ವಾಂಗ್ಚೂಕ್‌
ವಾಂಗ್ಚೂಕ್‌   

ನವದೆಹಲಿ: ‘ನೇಪಾಳ, ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳಂತೆಯೇ ಇಲ್ಲಿಯೂ ಪ್ರತಿಭಟನೆ ನಡೆಸುವುದಕ್ಕೆ ಪರಿಸರ ಕಾರ್ಯಕರ್ತ ಸೊನಮ್‌ ವಾಂಗ್ಚೂಕ್ ಅವರು ಝೆನ್‌–ಜಿ ಸಮುದಾಯವನ್ನು ಪ್ರಚೋದಿಸುತ್ತಿದ್ದರು. ತಮ್ಮ ಉದ್ದೇಶವನ್ನು ಮರೆಮಾಚಲು ಮಹಾತ್ಮ ಗಾಂಧಿ ಭಾಷಣಗಳನ್ನು ಉಲ್ಲೇಖಿಸಿದ್ದರು’ ಎಂದು ಕೇಂದ್ರ ಸರ್ಕಾರ ಮತ್ತು ಲಡಾಖ್‌ನ ಆಡಳಿತವು ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.

ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ವಾಂಗ್ಚೂಕ್‌ ಅವರನ್ನು ಬಂಧಿಸಿರುವುದರ ವಿರುದ್ಧ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರವಿಂದ್‌ ಕುಮಾರ್‌ ಮತ್ತು ಪಿ.ವಿ. ವರಾಳೆ ಅವರ ಪೀಠವು ಸೋಮವಾರ ನಡೆಸಿತು. ‘ಅರಬ್‌ ಸ್ಪ್ರಿಂಗ್‌’ (ಅರಬ್‌ ದೇಶಗಳಲ್ಲಿ ನಡೆದಿದ್ದ ಪ್ರಜಾಪ್ರಭುತ್ವವಾದಿ, ಆಡಳಿತ ವಿರೋಧಿ ಪ್ರತಿಭಟನೆಗಳು) ರೀತಿಯ ಪ್ರತಿಭಟನೆಗಳನ್ನೂ ವಾಂಗ್ಚೂಕ್‌ ತಮ್ಮ ಭಾಷಣಗಳಲ್ಲಿ ಉಲ್ಲೇಖಿಸಿದ್ದರು’ ಎಂದು ಕೇಂದ್ರ ವಾದಿಸಿತು.

‘ವಾಂಗ್ಚೂಕ್‌ ಅವರು ಕೇಂದ್ರ ಸರ್ಕಾರವನ್ನು ‘ಅವರು’ ಎಂದು ಸಂಬೋಧಿಸಿದ್ದರು. ಲಡಾಖ್‌ ಜನರನ್ನು ‘ನಾವು’ ಎಂದು ಸಂಬೋಧಿಸಿ ದೇಶದಿಂದ ಬೇರ್ಪಡಿಸಿದ್ದರು. ‘ಜನಾಭಿಪ್ರಾಯ ಸಂಗ್ರಹ’ದಂಥ ಮಾತುಗಳನ್ನಾಡಿದ್ದರು. ಇಂಥ ಮಾತುಗಳು ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಳಿಸುತ್ತಿದ್ದವು’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೇಹ್ತಾ ವಾದಿಸಿದರು.

ADVERTISEMENT

‘ಇಲ್ಲಿ ಅವರು ಅಥವಾ ನಾವು ಎಂಬುದಿಲ್ಲ. ನಾವೆಲ್ಲರೂ ಭಾರತೀಯರು. ತಮ್ಮ ಭಾಷಣವನ್ನು ಮುಚ್ಚಿ ಹಾಕಿಕೊಳ್ಳಲು ಮಹಾತ್ಮ ಗಾಂಧಿ ಅವರ ಭಾಷಣಗಳನ್ನು ಉಲ್ಲೇಖಿಸಿದ್ದಾರೆ. ತಮ್ಮದೇ ಸರ್ಕಾರದ ವಿರುದ್ಧ ಗಾಂಧೀಜಿ ಅವರು ಜನರನ್ನು ಎಂದಿಗೂ ಪ್ರಚೋದಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.