ADVERTISEMENT

ಕೃಷಿ ಕಾನೂನುಗಳ ಮೇಲೆ ನಿರ್ಬಂಧಕ್ಕೆ ಮಾರ್ಗ ಕಂಡುಕೊಳ್ಳಲು ಸೋನಿಯಾ ಸೂಚನೆ

ಕಾಂಗ್ರೆಸ್‌ ಆಡಳಿತದ ರಾಜ್ಯಗಳಿಗೆ ಸಂದೇಶ ರವಾನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:29 IST
Last Updated 28 ಸೆಪ್ಟೆಂಬರ್ 2020, 14:29 IST
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ   

ನವದೆಹಲಿ: ದೇಶದಾದ್ಯಂತ ರೈತರ ಪ್ರತಿಭಟನೆಗೆ ಕಾರಣವಾಗಿರುವ ಕೇಂದ್ರದ ಕೃಷಿ ಕಾನೂನುಗಳ ಮೇಲೆ ನಿರ್ಬಂಧ ಹೇರಲು ಕಾನೂನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌, 'ಕೇಂದ್ರದ ಕೃಷಿ ಕಾನೂನುಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳು ಅನ್ವೇಷಿಸಬೇಕು. ಸಂವಿಧಾನದ 254 (2) ನೇ ವಿಧಿ ಅನ್ವಯ ಕ್ರಮ ಕೈಗೊಳ್ಳಲು ಮುಂದಾಗಬೇಕು. ಈ ವಿಧಿಯು ಕೇಂದ್ರ ಸರ್ಕಾರದ ಕಾನೂನಿನ ಮೇಲೆ ನಿಯಂತ್ರಣ ಹೊಂದಲು ರಾಜ್ಯ ಶಾಸಕಾಂಗಗಳಿಗೆ ಅನುವು ಮಾಡಿಕೊಡುತ್ತದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷೆ ತಿಳಿಸಿದ್ದಾರೆ' ಎಂದು ಅವರು ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ರದ್ದತಿಗಳಂತಹ ರೈತ ವಿರೋಧಿ ನೀತಿಗಳು ಈ ಕೃಷಿ ಕಾನೂನಿನಲ್ಲಿದೆ. ಇವುಗಳ ಮೇಲೆ ನಿರ್ಬಂಧ ಹೇರುವುದರ ಮೂಲಕ ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಬಿಜೆಪಿ ಎಸಗಲು ಹೊರಟಿರುವ ಅನ್ಯಾಯದಿಂದ ರೈತರನ್ನು ಉಳಿಸಿದಂತಾಗುತ್ತದೆ ಎಂದು ಸೋನಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಕೃಷಿ ಸಂಬಂಧಿ ಮಸೂದೆಗಳು ರೈತರಿಗೆ ಮರಣ ಶಾಸನವಾಗಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ ಆಡಳಿತವಿರುವ ಪಂಜಾಬ್‌ನಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.