ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಇದ್ದಾರೆ
ಪಿಟಿಐ ಚಿತ್ರ
ನವದೆಹಲಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ವರ್ಷದ 100 ದಿನಗಳ ಬದಲು 150 ದಿನ ದುಡಿಮೆ ನೀಡಬೇಕು. ದಿನಕ್ಕೆ ಕನಿಷ್ಠ ಕೂಲಿ ಮೊತ್ತವನ್ನು ₹400ಕ್ಕೆ ನಿಗದಿಪಡಿಸಬೇಕು ಎಂದು ಕಾಂಗ್ರೆಸ್‌ನ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆ ಮಾತನಾಡಿದ ಅವರು, ‘ಯುಪಿಎ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು 2005ರಲ್ಲಿ ಎಂಜಿನರೇಗಾ ಯೋಜನೆ ಜಾರಿಗೊಳಿಸಿದರು. ಗ್ರಾಮೀಣ ಭಾಗದ ಲಕ್ಷಾಂತರ ಬಡವರಿಗೆ ಇದು ದುಡಿಮೆ ನೀಡಿ ಆಸರೆಯಾಯಿತು. ಆದರೆ ಹಾಲಿ ಬಿಜೆಪಿ ಸರ್ಕಾರವು, ಸದ್ದಿಲ್ಲದೆ ಈ ಯೋಜನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಹತ್ತು ವರ್ಷಗಳ ಹಿಂದಿನ ಜಿಡಿಪಿಗೆ ಹೋಲಿಸಿದಲ್ಲಿ ಬಜೆಟ್‌ನಲ್ಲಿ ಇಂದಿಗೂ ಅದೇ ಮೊತ್ತವನ್ನೇ (₹86 ಸಾವಿರ ಕೋಟಿ) ಮೀಸಲಿಡಲಾಗುತ್ತಿದೆ. ಸದ್ಯದ ಹಣದುಬ್ಬರಕ್ಕೆ ಇದನ್ನು ಹೋಲಿಸಿದರೆ, ₹4 ಸಾವಿರ ಕೋಟಿ ಕಡಿಮೆಯೇ ಆಗಿದೆ. ಹಿಂದಿನ ವರ್ಷಗಳ ಬಾಕಿ ಹಣವನ್ನು ಪಾವತಿಸಲು ಹೆಚ್ಚುವರಿಯಾಗಿ ಶೇ 20ರಷ್ಟು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಸಮಸ್ಯೆ ಇಷ್ಟಕ್ಕೇ ಕೊನೆಗೊಳ್ಳದೆ, ಆಧಾರ್ ಸಂಖ್ಯೆ ಆಧರಿಸಿ ವೇತನ ಪಾವತಿ, ಮೊಬೈಲ್ ಮೂಲಕ ಹಾಜರಾತಿಯು ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಸೋನಿಯಾ ಹೇಳಿದ್ದಾರೆ.
‘2024ರಲ್ಲಿ ಚುನಾವಣೆ ಹೊಸ್ತಿಲಲ್ಲಿದ್ದ ಸರ್ಕಾರವು ನರೇಗಾ ವೇತನವನ್ನು ಸಾಂಕೇತಿಕ ಎಂಬಂತೆ ಶೇ 3ರಿಂದ 10ರಷ್ಟು ಹೆಚ್ಚಳ ಮಾಡಿತ್ತು. ವೇತನವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಉತ್ತರಾಖಂಡದಲ್ಲಿ ₹237 ಇದ್ದರೆ, ಆಂಧ್ರಪ್ರದೇಶದಲ್ಲಿ ₹300 ಇದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ಘನತೆಯ ದುಡಿಮೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.