ADVERTISEMENT

3 ವರ್ಷದ ಮಗುವಿನ ಮುಖದಲ್ಲಿ ಪುನಃ ಮುಗುಳ್ನಗು ಮೂಡಿಸಿದ ನಟ ಸೋನು ಸೂದ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2021, 4:49 IST
Last Updated 30 ಡಿಸೆಂಬರ್ 2021, 4:49 IST
ನಟ ಸೋನು ಸೂದ್‌, ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಪಡೆದ ಮಗು (ಟ್ವಿಟರ್‌ ಚಿತ್ರ)
ನಟ ಸೋನು ಸೂದ್‌, ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಪಡೆದ ಮಗು (ಟ್ವಿಟರ್‌ ಚಿತ್ರ)   

ಬೆಂಗಳೂರು: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 3 ವರ್ಷದ ಹೆಣ್ಣು ಮಗುವಿನ ಮುಖದಲ್ಲಿ ಪುನಃ ಮುಗುಳ್ನಗು ತರಿಸುವ ಮೂಲಕ ಸೋನು ಸೋದ್‌ ಹೃದಯವಂತಿಕೆ ಮೆರೆದಿದ್ದಾರೆ.

'ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 3 ವರ್ಷದ ಈಮಗುವಿನ ಮುಖದಲ್ಲಿ ಪುನಃ ಮುಗುಳ್ನಗುವನ್ನು ತರಲು ಸಾಧ್ಯವೇ?' ಎಂದು ಬಾಲಿವುಡ್‌ ನಟ ಸೋನು ಸೂದ್‌ ಅವರನ್ನು ಕೋರಿ ಲಾಲ್‌ ಪ್ರತುಲೇಂದ್ರ ಪ್ರತಾಪ್‌ ಸಿಂಗ್‌ ಎಂಬುವವರು ಟ್ವೀಟ್‌ ಮಾಡಿದ್ದರು.

ಉತ್ತರ ಪ್ರದೇಶದ ಆಜಮ್‌ಗಢ ಜಿಲ್ಲೆಯ ಭೀತರಿ ಗ್ರಾಮದ ಮಮತಾ ಪಂಕಜ್‌ ಯಾದವ್‌ ಅವರ ಮಗಳಿಗೆ ಮುಂಬೈನ ವಾಡಿಯಾ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದರ ಅಧಿಕೃತ ದಾಖಲೆಗಳನ್ನು ಅಕ್ಟೋಬರ್‌ 20ರಂದು ಪ್ರತಾಪ್‌ ಸಿಂಗ್‌ ಹಂಚಿಕೊಂಡಿದ್ದರು. ಈ ಬಗ್ಗೆ ಸರ್ಕಾರಿ ಅಧಿಕಾರಿ ಗೋವಿಂದ ಅಗರ್ವಾಲ್‌ ಅವರ ಜೊತೆ ವಿಚಾರಿಸುವಂತೆಯೂ ತಿಳಿಸಿದ್ದರು.

ADVERTISEMENT

ಮಗುವಿಗೆ ಶಸ್ತ್ರ ಚಿಕಿತ್ಸೆಗೆ 3 ಲಕ್ಷ ಹೊಂದಿಸಲು ಸಹಾಯ ಕೋರಲು ಅಗತ್ಯ ಸುತ್ತೋಲೆಯನ್ನು ವಾಡಿಯಾ ಆಸ್ಪತ್ರೆ ಸೆಪ್ಟೆಂಬರ್‌ 29ರಂದು ನೀಡಿತ್ತು. ಅಕ್ಟೋಬರ್‌ 20ಕ್ಕೆ ಗಡುವು ನೀಡಲಾಗಿತ್ತು. ಅದೇ ದಿನ ಬೆಳಗ್ಗೆ ಸೋನು ಸೂದ್‌ ಅವರನ್ನು ಟ್ಯಾಗ್‌ ಮಾಡಿ ಸಹಾಯ ಕೋರಲಾಗಿತ್ತು.

ಪುನಃ ಮಗುವಿನ ಮುಖದಲ್ಲಿ ಮುಗುಳ್ನಗು ತರಲಾಗುವುದು. ವಾಡಿಯಾ ಆಸ್ಪತ್ರೆಯಲ್ಲಿ ಶನಿವಾರ ಮಗುವಿನ ಶಸ್ತ್ರ ಚಿಕಿತ್ಸೆಗೆ ಸಮಯ ನಿಗದಿ ಮಾಡಲಾಗಿದೆ ಎಂದು ಸೋನು ಸೂದ್‌ ಪ್ರತಿಕ್ರಿಯಿಸಿದ್ದರು.

ಮಗು ಮುಗುಳ್ನಗುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ಲಾಲ್‌ ಪ್ರತುಲೇಂದ್ರ ಪ್ರತಾಪ್‌ ಸಿಂಗ್‌, 'ಈ ಮಗುವಿನ ಮುಖದಲ್ಲಿ ಮುಗುಳ್ನಗುವನ್ನು ವಾಪಸ್‌ ತಂದಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದ' ಎಂದು ಸೋನು ಸೂದ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಗುವಿನ ಚಿಕಿತ್ಸೆ ನಿಟ್ಟಿನಲ್ಲಿ ಸಹಕರಿಸಿದ ಸೂದ್‌ ಚಾರಿಟಿ ಫೌಂಡೇಷನ್‌ ಮತ್ತು ಗೋವಿಂದ ಅಗರ್ವಾಲ್‌ ಅವರಿಗೂ ಧನ್ಯವಾದ ತಿಳಿಸಿದ್ದಾರೆ.

ಇದಕ್ಕೆ ಚುಟುಕಾಗಿ ಪ್ರತಿಕ್ರಿಯಿಸಿರುವ ಸೋನು ಸೂದ್‌, 'ಸಹೋದರ, ಇದು ಪ್ರಾರ್ಥನೆಯ ಪರಿಣಾಮ ಮಾತ್ರ' ಎಂದಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿ ಮೊದಲ ಬಾರಿಗೆ ರಾಷ್ಟ್ರದಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದ ಸಂದರ್ಭ ವಲಸೆ ಕಾರ್ಮಿಕರಿಗೆ ಸೋನು ಸೂದ್‌ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಿದ್ದರು. ಆಮ್ಲಜನಕ ಕೊರತೆ ಸಮಸ್ಯೆ ಎದುರಾದಗಲೂ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದರು. ಸೂದ್‌ ಚಾರಿಟೇಬಲ್‌ ಫೌಂಡೇಷನ್‌ ಮೂಲಕ ಜನಸಾಮಾನ್ಯರಿಗೆ ಸಾಕಷ್ಟು ರೀತಿಯಲ್ಲಿ ನೆರವಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.