ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ಎಂಟು ವಾರಗಳೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ತಮಿಳುನಾಡು ಸರ್ಕಾರ ಸಲ್ಲಿಸುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಎಂಟು ವಾರ ಮುಂದೂಡಿದೆ.
‘ಜಲವಿವಾದಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ನಡುವೆ ಕೇಂದ್ರ ಸರ್ಕಾರ ಐದು ಸಭೆಗಳನ್ನು ನಡೆಸಿದೆ. ಕೇಂದ್ರ ರಚಿಸಿರುವ ಸಮಿತಿಯು ಸ್ಥಳ ಪರಿಶೀಲನೆ ನಡೆಸಿದೆ. ವರದಿ ಸಲ್ಲಿಸಲು ಆರರಿಂದ ಎಂಟು ವಾರಗಳ ಸಮಯ ಬೇಕು’ ಎಂದು ಕೇಂದ್ರ ಸರ್ಕಾರದ ವಕೀಲರು ಕೋರಿದರು. ಇದಕ್ಕೆ ತಮಿಳುನಾಡಿನ ವಕೀಲರು ವಿರೋಧ ವ್ಯಕ್ತಪಡಿಸಿ, ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಜಲ ವಿವಾದ ಬಗೆಹರಿಸಲು ‘ದಕ್ಷಿಣ ಪಿನಾಕಿನಿ ಜಲವಿವಾದ ನ್ಯಾಯಮಂಡಳಿ’ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
‘ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಸಂಧಾನ ಸಮಿತಿಯನ್ನು ರಚಿಸಲಾಗಿದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು. ಹೊಸದಾಗಿ ಸಂಧಾನ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.