ADVERTISEMENT

ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು

ಎರಡು ದಿನಗಳ ವಿಳಂಬ

ಪಿಟಿಐ
Published 3 ಜೂನ್ 2021, 15:24 IST
Last Updated 3 ಜೂನ್ 2021, 15:24 IST
ಮುಂಗಾರು ಪ್ರವೇಶ–ಸಾಂದರ್ಭಿಕ ಚಿತ್ರ
ಮುಂಗಾರು ಪ್ರವೇಶ–ಸಾಂದರ್ಭಿಕ ಚಿತ್ರ   

ನವದೆಹಲಿ: ಎರಡು ದಿನಗಳ ವಿಳಂಬದ ಬಳಿಕ ನೈರುತ್ಯ ಮುಂಗಾರು ಗುರುವಾರ ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಅರಬ್ಬಿ ಸಮುದ್ರ ಮತ್ತು ಕೇಂದ್ರ ಅರಬ್ಬಿ ಸಮುದ್ರ, ಲಕ್ಷದ್ವೀಪ, ತಮಿಳುನಾಡಿನ ಕೆಲವು ಭಾಗಗಳು, ಪುದುಚೇರಿ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ರಾಯಲಸೀಮಾ ಹಾಗೂ ದಕ್ಷಿಣ ಮತ್ತು ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ಮುಂದಿನ ಎರಡು ದಿನಗಳಲ್ಲಿ ನೈರುತ್ಯ ಮುಂಗಾರು ಪ್ರವೇಶಿಸಲಿದೆ ಎಂದು ತಿಳಿಸಿದೆ.

ವಾಡಿಕೆಯಂತೆ ಜೂನ್‌ 1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುತ್ತವೆ. ಈ ಮಾರುತಗಳಿಂದಾಗಿ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ದೇಶದ ಬಹುತೇಕ ಭಾಗಕ್ಕೆ ಮಳೆಯಾಗುತ್ತದೆ. ಆದರೆ, ಈ ಬಾರಿ ಎರಡು ದಿನ ತಡವಾಗಿದೆ.

ADVERTISEMENT

ಕಳೆದ ಆರು ವರ್ಷಗಳಲ್ಲಿ ಮುಂಗಾರು ತಡವಾಗಿ ಪ್ರವೇಶಿಸಿರುವುದು ಮೂರನೇ ಬಾರಿಯಾಗಿದೆ. 2016 ಮತ್ತು 2019ರಲ್ಲಿ ನೈರುತ್ಯ ಮುಂಗಾರು ಜೂನ್‌ 8ರಂದು ಪ್ರವೇಶಿಸಿತ್ತು.

ನೈರುತ್ಯ ಮುಂಗಾರು ಕೇರಳಕ್ಕೆ ಮೇ 30ರಂದು ಪ್ರವೇಶಿಸಿತ್ತು ಎಂದು ಖಾಸಗಿ ಹವಾಮಾನ ಸಂಸ್ಥೆ ‘ಸ್ಕೈಮೆಟ್‌’ ತಿಳಿಸಿತ್ತು. ಆದರೆ, ಮುಂಗಾರು ಪ್ರವೇಶಿಸಿದೆ ಎಂದು ಘೋಷಿಸಲು ವಾತಾವರಣ ಪೂರಕವಾಗಿರಲಿಲ್ಲ ಎಂದು ಹವಾಮಾನ ಇಲಾಖೆ ಪ್ರತಿಪಾದಿಸಿದೆ.

ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿದೆ ಎಂದು ಘೋಷಿಸಲು ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಗುರುತಿಸಿರುವ 14 ಸ್ಥಳಗಳ ಪೈಕಿ ಶೇಕಡ 60ರಷ್ಟರಲ್ಲಿ ಮೇ 10ರ ಬಳಿಕ ಸತತ ಎರಡು ದಿನಗಳ ಕಾಲ 2.5 ಮಿಲಿ ಮೀಟರ್‌ ಅಥವಾ ಹೆಚ್ಚು ಮಳೆಯಾಗಿರಬೇಕು. ಜತೆಗೆ ಗಾಳಿಯ ವೇಗ ಪರಿಗಣಿಸಲಾಗುತ್ತದೆ. ಈ ರೀತಿಯ ವಿವಿಧ ಅಂಶಗಳನ್ನು ವಿಶ್ಲೇಷಿಸಿದ ಬಳಿಕವೇ ಮುಂಗಾರು ಪ್ರವೇಶದ ಬಗ್ಗೆ ಘೋಷಿಸಲಾಗುತ್ತದೆ ಎಂದು ತಿಳಿಸಿದೆ.

ಈ ಋತುವಿನಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತಲೂ ಹೆಚ್ಚು ಮಳೆಯಾಗಲಿದೆ. ಆದರೆ, ಪೂರ್ವ ಮತ್ತು ಈಶಾನ್ಯ ಭಾರತ ಹಾಗೂ ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.