ADVERTISEMENT

ಆಮ್ಲಜನಕ ವ್ಯವಸ್ಥೆಯಲ್ಲಿ ಸೋರಿಕೆ: ಶುಕ್ಲಾ ಅಂತರಿಕ್ಷಯಾನ ಮತ್ತೆ ಮುಂದೂಡಿಕೆ

‘ಆಕ್ಸಿಯಂ–4’ ಮುಂದೂಡಿಕೆ ಘೋಷಿಸಿದ ‘ಸ್ಪೇಸ್‌ಎಕ್ಸ್’, ‘ಇಸ್ರೊ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 16:15 IST
Last Updated 11 ಜೂನ್ 2025, 16:15 IST
ಶುಭಾಂಶು ಶುಕ್ಲಾ
ಶುಭಾಂಶು ಶುಕ್ಲಾ   

ಚೆನ್ನೈ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಕಳುಹಿಸುವ ಮಹತ್ವಾಕಾಂಕ್ಷೆಯ ‘ಆ್ಯಕ್ಸಿಯಂ–4’ ಮಿಷನ್‌ ಅನ್ನು ಬುಧವಾರ ಉಡಾವಣೆಗೂ ಸುಮಾರು 12 ಗಂಟೆಗಳ ಮುನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಮಿಷನ್‌ನ ಪರೀಕ್ಷೆಯ ವೇಳೆ ‘ಪ್ರೊಪಲ್ಷನ್‌ ವ್ಯವಸ್ಥೆ’ಯಲ್ಲಿ ದ್ರವ ಆಮ್ಲಜನಕ ಸೋರಿಕೆ ಪತ್ತೆಯಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಮಿಷನ್‌ ಅನ್ನು ಮೂರನೇ ಬಾರಿ ಮುಂದೂಡಿದಂತಾಗಿದೆ. ಆದರೆ ಈ ಬಾರಿ, ಉಡಾವಣೆಯ ಮುಂದಿನ ದಿನಾಂಕ ಮತ್ತು ಸಮಯ ಘೋಷಣೆಯಾಗಿಲ್ಲ.

1984ರಲ್ಲಿ ಭಾರತದ ರಾಕೇಶ್‌ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. ಅದಾದ 41 ವರ್ಷಗಳ ಬಳಿಕ ಭಾರತದ ಮತ್ತೊಬ್ಬ ಗಗನಯಾನಿ ಶುಭಾಂಶು ಶುಕ್ಲಾ ಅವರು ಈ ಅಂತರಿಕ್ಷ ಯಾತ್ರೆ ಕೈಗೊಳ್ಳುವವರಿದ್ದರು.

ADVERTISEMENT

ಉಡಾವಣೆಯನ್ನು ಬುಧವಾರ ಸಂಜೆ 5.30ಕ್ಕೆ ನಿಗದಿಪಡಿಸಲಾಗಿತ್ತು. ಅಮೆರಿಕದ ಉದ್ಯಮಿ ಇಲಾನ್‌ ಮಸ್ಕ್‌ ಅವರ ಒಡೆತನದ ‘ಸ್ಪೇಸ್‌ ಎಕ್ಸ್‌’ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬೆಳಿಗ್ಗೆ 6.30ರ ಸುಮಾರಿಗೆ ಪ್ರತ್ಯೇಕ ಹೇಳಿಕೆಗಳ ಮೂಲಕ ಮಿಷನ್‌ ಮುಂದೂಡಿಕೆಯನ್ನು ಘೋಷಿಸಿದವು. ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸಲು ಸಮಯಾವಕಾಶ ಬೇಕಾಗುತ್ತದೆ ಎಂದು ಎರಡೂ ಸಂಸ್ಥೆಗಳು ಪ್ರಕಟಣೆಯಲ್ಲಿ ಹೇಳಿವೆ.

‘ದ್ರವ ಆಮ್ಲಜನಕ ಸೋರಿಕೆಯನ್ನು ಸರಿಪಡಿಸಲು ಹೆಚ್ಚುವರಿ ಸಮಯದ ಅಗತ್ಯವಿದೆ. ಅದು ಪೂರ್ಣಗೊಂಡ ಬಳಿಕ, ಉಡಾವಣೆಗೆ ಹೊಸ ದಿನಾಂಕವನ್ನು ಹಂಚಿಕೊಳ್ಳುತ್ತೇವೆ’ ಎಂದು ‘ಸ್ಪೇಸ್‌ ಎಕ್ಸ್‌’ ಪ್ರಕಟಣೆಯಲ್ಲಿ ತಿಳಿಸಿದೆ. 

ಈ ಮೊದಲು ಜೂನ್‌ 8ರಂದು ಉಡಾವಣೆ ಕೈಗೊಳ್ಳಲು ಯೋಜಿಸಲಾಗಿತ್ತು. ಆದರೆ ಅದನ್ನು ಜೂನ್‌ 10ಕ್ಕೆ, ಆ ನಂತರ ಜೂನ್‌ 11ಕ್ಕೆ ಮುಂದೂಡಲಾಗಿತ್ತು.  

‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಶುಕ್ಲಾ ಅವರೊಂದಿಗೆ, ಹಂಗರಿ ಮತ್ತು ಪೋಲೆಂಡ್‌ನ ಗಗನಯಾನಿಗಳೂ ಪ್ರಯಾಣಿಸುವವರಿದ್ದರು. ಈ ಮಿಷನ್‌ ಅನ್ನು ‘ಸ್ಪೇಸ್‌ ಎಕ್ಸ್‌’ ಮತ್ತು ‘ನಾಸಾ’ ಸಹಭಾಗಿತ್ವದಲ್ಲಿ ನಿರ್ವಹಿಸಲಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.