ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಶೋವಿಕ್ ಚಕ್ರವರ್ತಿಗೆ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಾದಕ ವಸ್ತು ನಿಯಂತ್ರಣ ಸಂಸ್ಥೆಯು (ಎನ್‌ಸಿಬಿ) ಡ್ರಗ್ಸ್ ಪ್ರಕರಣಗಳದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸೋದರ ಶೋವಿಕ್ ಚಕ್ರವರ್ತಿಯನ್ನು ಬಂಧಿಸಿತ್ತು. ನಟಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಮೂಲಕ ಡ್ರಗ್ಸ್‌ಗಳನ್ನು ಖರೀದಿಸಿ ಸುಶಾಂತ್ ಸಿಂಗ್ ರಜಪೂತ್‌ಗೆ ನೀಡುತ್ತಿದ್ದರು ಎಂದು ಈ ಹಿಂದೆ ಎನ್‌ಸಿಬಿ ಕೋರ್ಟ್‌ಗೆ ತಿಳಿಸಿತ್ತು.
ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಸೆಪ್ಟೆಂಬರ್‌ನಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಅಕ್ಟೋಬರ್ 7ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ದೀಪೇಶ್ ಸಾವಂತ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರಿಗೂ ಜಾಮೀನು ನೀಡಲಾಗಿತ್ತು. ಆದರೆ, ಶೋವಿಕ್‌ಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿತ್ತು.
ಬುಧವಾರ ವಿಶೇಷ ಎನ್‌ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಕೋರ್ಟ್ ಶೋವಿಕ್‌ಗೆ ಜಾಮೀನು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.