
ನವದೆಹಲಿ: 2009–10ರ ಅವಧಿಯಲ್ಲಿ ಕೃತಕ ಅಂಗಾಂಗ ಹಾಗೂ ಉಪಕರಣಗಳ ವಿತರಣೆಯಲ್ಲಿ ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಪತ್ನಿ ಲೂಸಿ ಖುರ್ಷೀದ್ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಸಲ್ಲಿಸಿದ್ದ ಚಾರ್ಜ್‌ಶೀಟ್ ಪರಿಗಣಿಸಲು ವಿಶೇಷ ನ್ಯಾಯಾಲಯವು ಒಪ್ಪಿಗೆ ನೀಡಿದೆ.
‘ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶ ನೀಡುವಂತೆ ಕೋರಿ ಇ.ಡಿ ಮನವಿ ಮಾಡಿತ್ತು. ಇದಕ್ಕೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯವು ಒಪ್ಪಿಗೆ ಸೂಚಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬೆಳವಣಿಗೆಗಳ ಕುರಿತಂತೆ ಪ್ರತಿಕ್ರಿಯಿಸಲು ಲೂಸಿ ಖುರ್ಷೀದ್ ನಿರಾಕರಿಸಿದರು.
ಲೂಸಿ ಖುರ್ಷಿದ್ ಅವರು ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಜಾಕೀರ್ ಹುಸೇನ್ ಮೆಮೊರಿಯಲ್ ಟ್ರಸ್ಟ್ 2009–10ರಲ್ಲಿ ಕೃತಕ ಅಂಗಾಂಗ ವಿತರಿಸುವುದಾಗಿ ಕೇಂದ್ರ ಸರ್ಕಾರದಿಂದ ₹71.50 ಲಕ್ಷ ಅನುದಾನ ಪಡೆದಿತ್ತು. ಆದರೆ, ಅಂಗಾಂಗ ವಿತರಿಸದೇ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳಲಾಗಿತ್ತು. ಈ ಕುರಿತು 2017ರಲ್ಲಿ ಉತ್ತರ ಪ್ರದೇಶ ಸರ್ಕಾರವು ಎಫ್‌ಐಆರ್ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.