ADVERTISEMENT

ಬೆಳಗಾವಿಯಲ್ಲಿ ಸ್ಪೈಸ್ ಜೆಟ್ ವಿಮಾನ ಇಳಿಯುವಾಗ ಎಡವಟ್ಟು: ಪೈಲಟ್‌ ಅಮಾನತು

ರನ್‌ವೇಯ ನಿಗದಿತ ಬದಿಯಲ್ಲಿ ಇಳಿಯದೆ ಇನ್ನೊಂದು ಬದಿಯಲ್ಲಿ ಇಳಿದ ವಿಮಾನ

ಪಿಟಿಐ
Published 25 ಅಕ್ಟೋಬರ್ 2021, 8:13 IST
Last Updated 25 ಅಕ್ಟೋಬರ್ 2021, 8:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹೈದರಾಬಾದ್‌–ಬೆಳಗಾವಿ ಮಾರ್ಗದ ಸ್ಪೈಸ್‌ ಜೆಟ್‌ ವಿಮಾನವು ಭಾನುವಾರ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ನಿಗದಿತ ರನ್‌ವೇ ತುದಿಯ ಬದಲಿಗೆ ಇನ್ನೊಂದು ತುದಿಯಲ್ಲಿ ತಪ್ಪಾಗಿ ಇಳಿದಿದ್ದು, ಇದಕ್ಕೆ ಕಾರಣರಾದ ಪೈಲಟ್‌ಗಳನ್ನು ಅಮಾನತಿನಲ್ಲಿ ಇಡಲಾಗಿದೆ.

ಭಾನುವಾರ ಈ ಘಟನೆ ನಡೆದಿದ್ದು, ವಿಮಾನ ಸುರಕ್ಷಿತವಾಗಿ ಕೆಳಗಿಳಿದಿದೆ ಎಂದು ವಿಮಾನಯಾನ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

‘ಅಕ್ಟೋಬರ್ 24 ರಂದು, ಡಿಎಎಸ್‌ಎಚ್‌8 ಕ್ಯೂ400 ಸ್ಪೈಸ್ ಜೆಟ್‌ ವಿಮಾನವು ಹೈದರಾಬಾದ್‌ನಿಂದ ಬೆಳಗಾವಿಗೆ ಹಾರಾಟ ನಡೆಸಿತು. ನಿಲ್ದಾಣದಲ್ಲಿ ಇಳಿಯುವ ವೇಳೆ, ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಚಾರ ನಿಯಂತ್ರಕ (ಎಟಿಸಿ) ವಿಭಾಗ, ರನ್‌ವೇ 26 ನಲ್ಲಿ ಇಳಿಯಲು ಸೂಚಿಸಿತು. ಆದರೆ ಪೈಲಟ್‌ಗಳು ವಿಮಾನವನ್ನು ರನ್‌ವೇ08 ನಲ್ಲಿ ಇಳಿಸಿದರು. ಈ ಮೂಲಕ ವಿಮಾನವನ್ನು ನಿಯೋಜಿತ ರನ್‌ವೇನಲ್ಲಿ ಇಳಿಸುವ ಬದಲು, ಇದೇ ರನ್‌ವೇಯಲ್ಲಿರುವ ಮತ್ತೊಂದು ತುದಿಯಲ್ಲಿ ಇಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ADVERTISEMENT

‘ವಿಮಾನ ಸುರಕ್ಷಿತವಾಗಿ ಕೆಳಗಿಳಿದಿದೆ. ಈ ಬೆಳವಣಿಗೆಗೆ ಕುರಿತು ವಿಮಾನಯಾನ ಸಂಸ್ಥೆ ತಕ್ಷಣ ಕ್ರಮ ಕೈಗೊಂಡಿದ್ದು, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆಗೆ ಮಾಹಿತಿ ನೀಡಲಾಗಿದೆ‘ ಎಂದು ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.