ಮುಂಬೈ: ಯುದ್ಧ ನೌಕೆಗಳ ಬಗೆಗಿನ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಜತೆ ಹಂಚಿಕೊಂಡಿರುವ ಆರೋಪದಡಿ ಬಂಧಿತರಾಗಿರುವ ಮೆಕ್ಯಾನಿಕಲ್ ಎಂಜಿನಿಯರ್ ರವೀಂದ್ರ ವರ್ಮಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ನ್ಯಾಯಾಲಯವು ಜೂನ್ 5 ರವರೆಗೆ ವಿಸ್ತರಿಸಿದೆ.
ರಕ್ಷಣಾ ತಂತ್ರಜ್ಞಾನ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಠಾಣೆ ನಿವಾಸಿ ರವೀಂದ್ರ(27) ಅವರನ್ನು ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಕಳೆದ ವಾರ ಬಂಧಿಸಿತ್ತು.
ವರ್ಮಾ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ತನಿಖೆ ನಡೆಸುವ ಮತ್ತು ಅವರ ಸಹೋದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂಬ ಪ್ರಾಸಿಕ್ಯೂಷನ್ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆಗೆ ಆದೇಶಿಸಿದೆ.
ಫೇಸ್‌ಬುಕ್‌ನಲ್ಲಿ ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದ ಪಾಕಿಸ್ತಾನಿ ಏಜೆಂಟ್‌ನಿಂದ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ರವೀಂದ್ರ ಅವರು ಯುದ್ಧ ನೌಕೆ ಮತ್ತು ಜಲಾಂತರ್ಗಾಮಿ ನೌಕೆಗಳ ಬಗೆಗಿನ ರಹಸ್ಯ ಮಾಹಿತಿಗಳನ್ನು ರೇಖಾಚಿತ್ರ, ಚಿತ್ರಗಳು ಮತ್ತು ಧ್ವನಿ ಟಿಪ್ಪಣಿಗಳ ಮೂಲಕ ಹಂಚಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ದೇಶ ಮತ್ತು ವಿದೇಶದಲ್ಲಿನ ಬ್ಯಾಂಕ್ ಖಾತೆಗಳಿಂದ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.