ADVERTISEMENT

ಶ್ರೀ ರಾಮ ನವಮಿ: ದೇಶದ ಜನರಿಗೆ ರಾಷ್ಟ್ರಪತಿ ಮುರ್ಮು, ಮೋದಿ ಸೇರಿ ಗಣ್ಯರ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2025, 4:15 IST
Last Updated 6 ಏಪ್ರಿಲ್ 2025, 4:15 IST
<div class="paragraphs"><p>ಶ್ರೀ ರಾಮ ನವಮಿ</p></div>

ಶ್ರೀ ರಾಮ ನವಮಿ

   

ನವದೆಹಲಿ: ದೇಶದೆಲ್ಲೆಡೆ ಇಂದು (ಭಾನುವಾರ) ಶ್ರೀ ರಾಮ ನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

ದೇಶವಾಸಿಗಳಿಗೆ ರಾಮ ನವಮಿ ಹಬ್ಬದ ಶುಭಾಶಯಗಳು. ಈ ಹಬ್ಬವು ಧರ್ಮ, ನ್ಯಾಯ ಮತ್ತು ಕರ್ತವ್ಯದ ಸಂದೇಶವನ್ನು ನೀಡುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನು ತ್ಯಾಗ, ಬದ್ಧತೆ, ಸಾಮರಸ್ಯ ಮತ್ತು ಶೌರ್ಯದಂತಹ ಉನ್ನತ ಆದರ್ಶಗಳನ್ನು ಮಾನವ ಕುಲಕ್ಕೆ ತೋರಿಸಿ ಕೊಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಪ್ರತಿಜ್ಞೆ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭ ಕೋರಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಸಮಸ್ತ ಜನತೆಗೆ ರಾಮ ನವಮಿಯ ಶುಭಾಶಯಗಳು. ಭಗವಾನ್‌ ಶ್ರೀ ರಾಮನ ಜನ್ಮ ದಿನಾಚರಣೆಯ ಈ ಪವಿತ್ರ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಹೊಸ ಪ್ರಜ್ಞೆ ಮತ್ತು ಉತ್ಸಾಹವನ್ನು ತರಲಿ. ಅದು ಬಲಿಷ್ಠ, ಸಮೃದ್ಧ ಮತ್ತು ಸಮರ್ಥ ಭಾರತದ ಸಂಕಲ್ಪಕ್ಕೆ ನಿರಂತರವಾಗಿ ಹೊಸ ಶಕ್ತಿಯನ್ನು ಒದಗಿಸಲಿ. ಜೈ ಶ್ರೀರಾಮ್‌’ ಎಂದು ಬರೆದುಕೊಂಡಿದ್ದಾರೆ.

ಎಲ್ಲಾ ದೇಶವಾಸಿಗಳಿಗೆ ರಾಮ ನವಮಿಯ ಹಬ್ಬದ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ, ನಾವು ನಮ್ಮ ಜೀವನದಲ್ಲಿ ಸತ್ಯ, ನೈತಿಕತೆ, ತ್ಯಾಗ, ಘನತೆ, ನಿಷ್ಠೆ, ನೀತಿಶಾಸ್ತ್ರ, ಸೇವೆ, ನ್ಯಾಯ ಮತ್ತು ಕರುಣೆಯ ಶ್ರೇಷ್ಠ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭ ಕೋರಿದ್ದಾರೆ.

ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿ ಮೌಲ್ಯಗಳನ್ನು ಕಾಪಾಡಿಕೊಳ್ಳುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ರಾಮ ನವಮಿಯ ಆಚರಣೆಯು ಶಾಂತಿಯುತ ರೀತಿಯಲ್ಲಿ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.