ADVERTISEMENT

ಶ್ರೀಕಾಕುಳಂ ಕಾಲ್ತುಳಿತ: ದೇವರ ದರ್ಶನಕ್ಕೆ ನೂಕುನುಗ್ಗಲೇ 10 ಜನರ ಪ್ರಾಣ ತೆಗೆಯಿತು

ಭಾರಿ ಸಂಖ್ಯೆಯಲ್ಲಿ ಭಕ್ತರ ಜಮಾವಣೆಯಿಂದ ನೂಕುನುಗ್ಗಲು * ಮೃತರಲ್ಲಿ 9 ಮಂದಿ ಮಹಿಳೆಯರು

ಪಿಟಿಐ
Published 1 ನವೆಂಬರ್ 2025, 16:15 IST
Last Updated 1 ನವೆಂಬರ್ 2025, 16:15 IST
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಚಿವ ಕೆ.ಅಚ್ಚನ್ನಾಯುಡು ಶನಿವಾರ ಸಾಂತ್ವನ ಹೇಳಿದರು  ಪಿಟಿಐ ಚಿತ್ರ 
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಚಿವ ಕೆ.ಅಚ್ಚನ್ನಾಯುಡು ಶನಿವಾರ ಸಾಂತ್ವನ ಹೇಳಿದರು  ಪಿಟಿಐ ಚಿತ್ರ     

ಹೈದರಾಬಾದ್‌: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಉಂಟಾದ ಕಾಲ್ತುಳಿತದಲ್ಲಿ 9 ಮಹಿಳೆಯರು ಹಾಗೂ 13 ವರ್ಷದ ಬಾಲಕ ಸೇರಿ ಒಟ್ಟು 10 ಜನರು ಮೃತಪಟ್ಟಿದ್ದಾರೆ.

ಈ ಅವಘಡದಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಗಾಯಗೊಂಡಿರುವ 15 ಜನರನ್ನು ಪಲಾಸ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಕಾಸಿಬುಗ್ಗಾದಲ್ಲಿ ನಿರ್ಮಿಸಲಾಗಿರುವ ಈ ದೇವಸ್ಥಾನವನ್ನು ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಘಾಟಿಸಲಾಗಿದೆ. ಖಾಸಗಿ ಟ್ರಸ್ಟ್‌ ಈ ದೇವಸ್ಥಾನದ ನಿರ್ವಹಣೆ ಮಾಡುತ್ತಿದೆ.

ಈ ಭಾಗದಲ್ಲಿ ಈ ದೇಗುಲವನ್ನು ‘ಚಿನ್ನ ತಿರುಪತಿ’ (ಚಿಕ್ಕ ತಿರುಪತಿ) ಎಂದೇ ಕರೆಯುತ್ತಾರೆ. ಕಾರ್ತಿಕ ಮಾಸದ ಮೊದಲ ಏಕಾದಶಿ ಅಂಗವಾಗಿ ಶನಿವಾರ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ವೇಳೆ ಉಂಟಾದ ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಸಚಿವ ಅಚ್ಚನ್ನಾಯುಡು, ಸ್ಥಳೀಯ ಶಾಸಕ ಗೌತು ಶಿರೀಷ ಅವರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ದೆಹಲಿಯಿಂದ ಭೋಪಾಲ್‌ಗೆ ಹೊರಟಿದ್ದ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಕೂಡ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ, ಕಾಸಿಬುಗ್ಗಾಕ್ಕೆ ಬಂದಿಳಿದರು. ರಕ್ಷಣೆ ಮತ್ತು ವೈದ್ಯಕೀಯ ತಂಡಗಳು ಕೂಡ ಸ್ಥಳಕ್ಕೆ ಧಾವಿಸಿವೆ.

ಪರಿಹಾರ ಘೋಷಣೆ: ‘ಶ್ರೀಕಾಕುಳಂ ಜಿಲ್ಲೆಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿರುವುದು ತಿಳಿದು ಅತೀವ ದುಃಖವಾಗಿದೆ. ತಮ್ಮವರನ್ನು ಕಳೆದುಕೊಂಡವರ ದುಃಖದಲ್ಲಿ ನಾನೂ ಭಾಗಿಯಾಗಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ’ ಎಂದು ಪ್ರಾರ್ಥಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿಯೂ ಅವರು ಘೋಷಿಸಿದ್ದಾರೆ. 

ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಅಮಿತ್‌ ಶಾ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ದುರ್ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದ ದೃಶ್ಯ  ಪಿಟಿಐ ಚಿತ್ರ 
ಕಾಲ್ತುಳಿತದಲ್ಲಿ ಭಕ್ತರ ಸಾವಿನಿಂದ ಆಘಾತಗೊಂಡಿರುವೆ. ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಸೂಚಿಸಿರುವೆ.
-ಎನ್‌.ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ
ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಜನರ ದಟ್ಟಣೆ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಪವನ್‌ ಕಲ್ಯಾಣ್ ಉಪಮುಖ್ಯಮಂತ್ರಿ
ಜನಸಂದಣಿ ನಿರ್ವಹಣೆಗೆ ಅಗತ್ಯವಿರುವ ಕ್ರಮಗಳನ್ನು ದೇವಸ್ಥಾನ ಆಡಳಿತ ಮಂಡಳಿ ಕೈಗೊಂಡಿಲ್ಲ. ಅಲ್ಲದೇ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುವ ಕುರಿತು ಅಧಿಕಾರಿಗಳಿಗೆ ತಿಳಿಸುವಲ್ಲಿ ಮಂಡಳಿ ವಿಫಲವಾಗಿದೆ.
- ಕೆ.ಅಚ್ಚನ್ನಾಯುಡು, ಸಚಿವ
ಇಂತಹ ಹಲವು ದುರ್ಘಟನೆಗಳು ಸಂಭವಿಸಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಡಳಿತ ಅಸಮರ್ಥ ಎಂಬುದನ್ನು ಇದು ತೋರಿಸುತ್ತದೆ
-ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ

ಕಾರಣ ಏನು?

ಕಾರ್ತಿಕ ಮಾಸದ ಮೊದಲ ಏಕಾದಶಿ ಪ್ರಯುಕ್ತ ಶನಿವಾರ ನಸುಕಿನಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದಾರೆ. 2 ಸಾವಿರದಿಂದ 3 ಸಾವಿರದಷ್ಟು ಭಕ್ತರಿಗೆ ಅವಕಾಶವಿರುವಂತೆ ನಿರ್ಮಿಸಿರುವ ದೇವಸ್ಥಾನದಲ್ಲಿ 25 ಸಾವಿರದಷ್ಟು ಜನರು ಸೇರಿದ್ದು ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತದೆ. ‘ದೇವಸ್ಥಾನವು ಮೊದಲ ಮಹಡಿಯಲ್ಲಿದೆ. ದೇವಸ್ಥಾನದ ದ್ವಾರ ತೆರೆದಾಗ ಏಕಾಏಕಿ ಭಾರಿ ಸಂಖ್ಯೆಯಲ್ಲಿ ಜನರು ಒಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಸರದಿಯಲ್ಲಿ ನಿಲ್ಲುವುದಕ್ಕೆ ಅನುಕೂಲ ಕಲ್ಪಿಸಲು ಅಳವಡಿಸಿದ್ದ ಲೋಹದ ರೇಲಿಂಗ್ ಕುಸಿದು ಬಿದ್ದಿದೆ. ಆಗ ಮೂಲೆಯೊಂದರಲ್ಲಿ ನಿಂತಿದ್ದ ಜನರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ’ ಎಂದು ಗೃಹ ಸಚಿವ ವಂಗಲಪುಡಿ ಅನಿತಾ ಹೇಳಿದ್ದಾರೆ.

‘ಈ ಮಧ್ಯೆ ಜನರ ಒಂದು ಗುಂಪು ನಿರ್ಗಮನ ಮಾರ್ಗದ ಮೂಲಕ ಗರ್ಭಗುಡಿಯತ್ತ ಹೋಗಲು ಯತ್ನಿಸಿದೆ. ಮತ್ತೊಂದು ಗುಂಪು ದರ್ಶನ ಪಡೆದು ಹೊರಗೆ ಹೋಗಲು ಮುಂದಾಗಿದೆ. ಇದೇ ವೇಳೆ ರೇಲಿಂಗ್‌ ಕೂಡ ಕುಸಿದು ಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದ್ದಾರೆ. 

‘ದೇವರ ದರ್ಶನಕ್ಕೆ ಹೋಗಲು ಹಾಗೂ ನಿರ್ಗಮಿಸಲು ಪ್ರತ್ಯೇಕ ಗೇಟುಗಳಿವೆ. ಬೆಳಿಗ್ಗೆಯಿಂದಲೇ ದಟ್ಟಣೆ ಇತ್ತು.  ಶೀಘ್ರವೇ ದರ್ಶನ ಪಡೆಯುವ ಉದ್ದೇಶ ಹೊಂದಿದ್ದ ಕೆಲವರು ನಿರ್ಗಮನ ಗೇಟ್‌ ಮೂಲಕ ಪ್ರವೇಶಿಸಿದ್ದಾರೆ. ಅದೇ ಗೇಟ್‌ ಮೂಲಕ ಹೊರಗೆ ಬರಲು ಕೆಲವರು ಮುಂದಾಗಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಹೃದಯವಿದ್ರಾವಕ ದೃಶ್ಯಗಳು...

ಕಾಲ್ತುಳಿತ ಉಂಟಾದ ಮರುಗಳಿಗೆಯಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದವು. ದರ್ಶನಕ್ಕಾಗಿ ನಿರ್ಮಿಸಿರುವ ಕಿರಿದಾದ ಮಾರ್ಗದಲ್ಲಿ ನೂರಾರು ಮಹಿಳೆಯರು ಸಿಲುಕಿದ್ದರು. ಜನರ ದಟ್ಟಣೆಯೂ ಹೆಚ್ಚಾಗಿದ್ದರಿಂದ ಮಹಿಳೆಯರು ಉಸಿರಾಡುವುದಕ್ಕೂ ಕಷ್ವಪಡುತ್ತಿದ್ದರು. ಪೂಜಾ ಸಾಮಗ್ರಿಗಳಿದ್ದ ಬುಟ್ಟಿಗಳನ್ನು ಹಿಡಿದುಕೊಂಡಿದ್ದ ಅವರು ನೆರವಿಗಾಗಿ ಮೊರೆ ಇಡುತ್ತಿದ್ದರು. ಘಟನಾ ಸ್ಥಳದಿಂದ ಹೇಗಾದರೂ ಪಾರಾಗಿ ಹೊರಗೆ ಹೋಗಬೇಕು ಎಂಬ ಧಾವಂತದಲ್ಲಿ ಹಲವರು ರೇಲಿಂಗ್‌ಗಳನ್ನು ಏರಲು ಪ್ರಯತ್ನಿಸಿದರು. ಗುಂಪಿನಲ್ಲಿ ಸಿಲುಕಿದ್ದ ತಮ್ಮವರನ್ನು ರಕ್ಷಿಸಲು ಕೆಲ ಪುರುಷರು ಹರಸಾಹಸ ಪಟ್ಟರು. ತಮ್ಮವರನ್ನು ಎಳೆದರು. ಹೀಗಾಗಿ ದೇಗುಲದ ಇಡೀ ಪ್ರಾಂಗಣದಲ್ಲಿ ಅಯೋಮಯ ಸ್ಥಿತಿ ನಿರ್ಮಾಣವಾಗಿತ್ತು. ಕಾಲ್ತುಳಿತಕ್ಕೆ ಸಿಲುಕಿ ಕುಸಿದು ಬಿದ್ದವರಿಗೆ ಅವರ ಸಂಬಂಧಿಕರು ಸಿಪಿಆರ್‌ (ಹೃದಯಕ್ಕೆ ಪುನಶ್ಚೇತನ ನೀಡುವ ಪ್ರಕ್ರಿಯೆ) ಕೊಡುತ್ತಿದ್ದರು. ಇನ್ಣೂ ಕೆಲವರು ಕೆಳಗೆ ಬಿದ್ದು ಪ್ರಜ್ಞಾಹೀನರಾದವರ ಪಾದ ಹಾಗೂ ಹಸ್ತಗಳನ್ನು ಉಜ್ಜುತ್ತಿದ್ದ ದೃಶ್ಯಗಳು ಕೂಡ ಕಂಡುಬಂದವು.

ಪರವಾನಗಿ ಇಲ್ಲದೆಯೇ ದೇಗುಲ ನಿರ್ಮಾಣ: ಎಸ್‌ಪಿ

‘ಈ ದೇವಸ್ಥಾನ ನಿರ್ಮಿಸಿರುವ ಮುಕುಂದ ಪಾಂಡಾ ಅವರು ಕಾರ್ಯಕ್ರಮ ಕುರಿತು ನಮಗೆ ಮಾಹಿತಿಯನ್ನೇ ನೀಡಿರಲಿಲ್ಲ. ಅಲ್ಲದೇ ಈ ದೇವಸ್ಥಾನ ನಿರ್ಮಾಣಕ್ಕೆ ಅವರು ಅಗತ್ಯ ಪರವಾನಗಿ ಪಡೆದಿಲ್ಲ. ಅನುಮತಿ ಪಡೆಯದೆಯೇ ಉದ್ಘಾಟಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಮಹೇಶ್ವರ ರೆಡ್ಡಿ ಹೇಳಿದರು. ‘ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವಾಗ ದೇವಸ್ಥಾನ ಆಡಳಿತ ಮಂಡಳಿಗಳು ಪರವಾನಗಿ ಪಡೆಯುವುದು ಕಡ್ಡಾಯ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ 200 ಇದ್ದರೂ ಸರಿ ಪರವಾನಗಿ ಪಡೆಯಬೇಕು. ಪರಿಸ್ಥಿತಿಯನ್ನು ಅವಲೋಕಿಸಿ ಬಂದೋಬಸ್ತ್‌ ವ್ಯವಸ್ಥೆ ಮಾಡುತ್ತೇವೆ’ ಎಂದರು.

ತನಿಖೆಗೆ ಆದೇಶ

ಅಮರಾವತಿ: ಕಾಸಿಬುಗ್ಗಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಶನಿವಾರ ಘೋಷಿಸಿದ್ದಾರೆ.

ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‘ಕಾರ್ಯಕ್ರಮ ಆಯೋಜಕರು ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಇದರಿಂದ ಸೂಕ್ತ ಬಂದೋಬಸ್ತ್‌ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದರು.

‘ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದಕ್ಕೆ ಹೊಣೆಯಾದವರನ್ನು ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸಲಾಗುವುದು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.