ADVERTISEMENT

ಛತ್ತೀಸಗಡದಲ್ಲಿ ಇಂದು ಮತದಾನ: 190 ಅಭ್ಯರ್ಥಿಗಳು ಕಣದಲ್ಲಿ

ಮುಖ್ಯಮಂತ್ರಿ ರಮಣ್‌ ಸಿಂಗ್‌ ಭವಿಷ್ಯವೂ ಇಂದೇ ನಿರ್ಧಾರ

ಪಿಟಿಐ
Published 11 ನವೆಂಬರ್ 2018, 19:56 IST
Last Updated 11 ನವೆಂಬರ್ 2018, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಪುರ (ಛತ್ತೀಸಗಡ):ಛತ್ತೀಸಗಡದ 90 ವಿಧಾನಸಭಾ ಕ್ಷೇತ್ರಗಳಲ್ಲಿ 18 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಸೋಮವಾರ ಮತದಾನ ನಡೆಯಲಿದೆ.

ನಕ್ಸಲರ ದಾಳಿ ಭೀತಿ ಇರುವುದರಿಂದ ಮತ್ತು ಭಾನುವಾರವೂ ನಕ್ಸಲರು ದಾಳಿ ನಡೆಸಿರುವುದರಿಂದ ಮತದಾನ ನಡೆಯುತ್ತಿರುವ ಪ್ರದೇಶದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಅಲ್ಲದೆ 10 ಕ್ಷೇತ್ರಗಳಲ್ಲಿ ಮತದಾನವು ಬೆಳಿಗ್ಗೆ 7ಕ್ಕೆ ಆರಂಭವಾಗಿ ಮಧ್ಯಾಹ್ನ 3ಕ್ಕೆ ಕೊನೆಗೊಳ್ಳಲಿದೆ. ಉಳಿದ ಎಂಟು ಕ್ಷೇತ್ರಗಳಲ್ಲಿ ಬೆಳಿಗ್ಗೆ 8ಕ್ಕೆ ಆರಂಭವಾಗಿ ಸಂಜೆ 5ಕ್ಕೆ ಕೊನೆಗೊಳ್ಳಲಿದೆ.

ADVERTISEMENT

ಈ ಕ್ಷೇತ್ರಗಳ ಹಲವು ಮತಗಟ್ಟೆಗಳಲ್ಲಿ 20 ವರ್ಷಗಳಲ್ಲಿ ಇದೇ ಮೊದಲ ಬಾರಿ ಮತದಾನ ನಡೆಯುತ್ತಿದೆ. ಹೀಗಾಗಿ ಚುನಾವಣಾ ಸಿಬ್ಬಂದಿ ಸಹ ರೋಮಾಂಚನ ವ್ಯಕ್ತಪಡಿಸಿದ್ದಾರೆ.

‘ನಮ್ಮ ಜೀವಕ್ಕೆ ಅಪಾಯವಿದ್ದರೂ ಚುನಾವಣಾ ಕಾರ್ಯದಲ್ಲಿ ಭಾಗವಹಿಸುತ್ತಿದ್ದೇವೆ. ಹೊಸ ಕ್ರಾಂತಿ ಮಾಡುತ್ತಿದ್ದೇವೇನೊ ಎನಿಸುತ್ತಿದೆ’ ಎಂದು ಹಲವರು ಖುಷಿ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ರಮಣ್ ಸಿಂಗ್ ಅವರು ರಾಜನಂದಗಾಂವ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ನಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ ಕರುಣಾ ಶುಕ್ಲಾ ಅವರು ಪೈಪೋಟಿಗೆ ಇಳಿದಿದ್ದಾರೆ. ಹೀಗಾಗಿ ಮೊದಲ ಹಂತದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.