ADVERTISEMENT

ಪ್ರಶ್ನಿಸುವುದು ದೇಶದ್ರೋಹವಾದರೆ ಪ್ರಜಾಪ್ರಭುತ್ವ ಉಳಿಯದು: ಸ್ಟಾಲಿನ್

ಹಿರಿಯ ಪತ್ರಕರ್ತರಿಬ್ಬರಿಗೆ ಸಮನ್ಸ್ ನೀಡಿರುವುದಕ್ಕೆ ಸ್ಟಾಲಿನ್ ಖಂಡನೆ

ಪಿಟಿಐ
Published 20 ಆಗಸ್ಟ್ 2025, 20:22 IST
Last Updated 20 ಆಗಸ್ಟ್ 2025, 20:22 IST
   

ಚೆನ್ನೈ: ಪ್ರಶ್ನಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಿದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬುಧವಾರ ಹೇಳಿದ್ದಾರೆ.

ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹಿರಿಯ ಪತ್ರಕರ್ತರಿಗೆ ಸಮನ್ಸ್ ನೀಡಿರುವ ಅಸ್ಸಾಂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಈ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತರಿಬ್ಬರಿಗೆ ಸುಪ್ರೀಂ ಕೋರ್ಟ್‌ ರಕ್ಷಣೆ ನೀಡಿದ್ದರೂ, ಸಮನ್ಸ್ ಜಾರಿಗೊಳಿಸಲಾಗಿದೆ’ ಎಂದರು.

‘ಎಫ್‌ಐಆರ್‌ ಪ್ರತಿ ಮತ್ತು ಸಂಬಂಧಿಸಿದ ದಾಖಲೆಗಳನ್ನು ನೀಡಿಲ್ಲ ಆದರೆ ಬಂಧನದ ಬೆದರಿಕೆ ಹಾಕಲಾಗಿದೆ. ಹಿರಿಯ ಪತ್ರಕ‌ರ್ತರಾದ ಸಿದ್ಧಾರ್ಥ್ ವರದರಾಜನ್‌ ಮತ್ತು ಕರಣ್‌ ಥಾಪರ್‌ ಅವರಿಗೆ ಸಮನ್ಸ್‌ ನೀಡಿರುವ ಅಸ್ಸಾಂ ಪೊಲೀಸರು ನಡೆಯನ್ನು ಖಂಡಿಸುತ್ತೇನೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ದೇಶದ್ರೋಹ ಪ್ರಕರಣದ ಕುರಿತ ವಿಚಾರಣೆಗಾಗಿ ಅಪರಾಧ ವಿಭಾಗದ ಮುಂದೆ ಆಗಸ್ಟ್ 22ರಂದು ವಿಚಾರಣೆಗೆ ‌ಹಾಜರಾಗುವಂತೆ  ಸಿದ್ಧಾರ್ಥ್ ವರದರಾಜನ್‌ ಮತ್ತು ಕರಣ್‌ ಥಾಪರ್‌ ಅವರಿಗೆ ಸಮನ್ಸ್‌ ನೀಡಲಾಗಿದೆ. 

ಗೊಗೊಯ್‌ ಟೀಕೆ

ಹಿರಿಯ ಪತ್ರಕರ್ತರಿಗೆ ಅಸ್ಸಾಂ ಪೊಲೀಸರು ಸಮನ್ಸ್ ನೀಡಿರುವುದರ ಬಗ್ಗೆ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೊಯ್‌ ಅವರೂ ಆಕ್ರೋಶ ವ್ಯಕ್ತಪಡಿಸಿದರು. ‘ಕೆಟ್ಟ ಕಾರಣಗಳಿಗಾಗಿ ಅಸ್ಸಾಂ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ದುರಾಸೆ ಭ್ರಷ್ಟಾಚಾರ ಅಸಮರ್ಥತೆ ಕಾನೂನುಬಾಹಿರತೆಯೇ ಆವರಿಸಿದೆ’ ಎಂದು ಗೊಗೊಯ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಅಸ್ಸಾಂ ಈ ರೀತಿ ಇರಬಾರದು. ರಾಜ್ಯದ ಜನರು ತಮ್ಮ ಕನಸಿನ ಅಸ್ಸಾಂ ಅನ್ನು ನಿರ್ಮಿಸುವ ನಾಯಕತ್ವವನ್ನು ಬಯಸುತ್ತಾರೆ’ ಎಂದು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.