ADVERTISEMENT

ಸಂಯುಕ್ತ ರಂಗಕ್ಕೆ ಹಿನ್ನಡೆ?

ಫಲನೀಡದ ಚಂದ್ರಶೇಖರ ರಾವ್– ಸ್ಟಾಲಿನ್‌ ಮಾತುಕತೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:37 IST
Last Updated 13 ಮೇ 2019, 19:37 IST
ಚಂದ್ರಶೇಖರರಾವ್
ಚಂದ್ರಶೇಖರರಾವ್   

ಚೆನ್ನೈ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನುಇತ್ತೀಚೆಗಷ್ಟೇ ಭೇಟಿಮಾಡಿ ಸಂಯುಕ್ತ ರಂಗ ರಚನೆಯ ಮಾತುಕತೆ ನಡೆಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಅವರನ್ನುಸೋಮವಾರ ಭೇಟಿ ಮಾಡಿದರು.

ಇಬ್ಬರು ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಆದರೆ ಮಾತುಕತೆ ವಿಫಲಗೊಂಡಿದ್ದು, ಕೆಸಿಆರ್‌ ಅವರ ಉದ್ದೇಶ ಈಡೇರಿಲ್ಲ ಎಂದು ತಿಳಿದುಬಂದಿದೆ.

ಪ್ರಾದೇಶಿಕ ಪಕ್ಷಗಳನ್ನೆಲ್ಲ ಒಗ್ಗೂಡಿಸಿ ‘ಸಂಯುಕ್ತ ರಂಗ’ವೊಂದನ್ನು ರಚಿಸುವ ಬಗ್ಗೆ ಕೆಸಿಆರ್‌ ಅವರು ಸ್ಟಾಲಿನ್‌ ಮುಂದೆ ಪ್ರಸ್ತಾಪ ಮಾಡಿದ್ದರು. ಯುಪಿಎ– ಎನ್‌ಡಿಎಯೇತರ ರಂಗಕ್ಕೆ ಸ್ಟಾಲಿನ್‌ ಅವರು ಬೆಂಬಲ ನೀಡಬೇಕು ಎಂದು ಕೆಸಿಆರ್‌ ಬಯಸಿದ್ದರು. ಆದರೆ ಇದಕ್ಕೆ ಒಪ್ಪದ ಸ್ಟಾಲಿನ್‌, ‘ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದ ಬಳಿಕ ನೀವು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ಕೊಡಿ’ ಎಂದು ಕೆಸಿಆರ್‌ಗೆ ಆಹ್ವಾನ ನೀಡಿದ್ದಾರೆ. ಇದರಿಂದ ರಾವ್‌ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಕಾಂಗ್ರೆಸ್‌ ಜೊತೆ ತಮ್ಮ ಪಕ್ಷ ಮಾಡಿಕೊಂಡಿರುವ ಮೈತ್ರಿಗೆ ಈಗಲೂ ಬದ್ಧವಿದೆ. ಅದೂ ಅಲ್ಲದೆ ರಾಹುಲ್‌ ಗಾಂಧಿಯೇ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿರಬೇಕು ಎಂಬ ಪ್ರಸ್ತಾವವನ್ನು ಡಿಎಂಕೆ ಪಕ್ಷವೇ ಮಂಡಿಸಿತ್ತು. ಡಿಎಂಕೆಯು ಯಾವ ಕಾರಣಕ್ಕೂ ತನ್ನ ಬಿಜೆಪಿ ವಿರೋಧಿ ನಿಲುವನ್ನು ಬದಲಿಸುವುದಿಲ್ಲ ಎಂಬುದನ್ನು ಮಾತುಕತೆಯ ವೇಳೆ ಸ್ಟಾಲಿನ್‌ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಅವರು ಒಂದು ಯೋಜನೆಯೊಂದಿಗೆ ಬಂದಿದ್ದರು. ಅದು ನಮಗೆ ಸ್ವೀಕಾರಾರ್ಹವಾಗಿರಲಿಲ್ಲ. ನಾವು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಮತ್ತು ಅದಕ್ಕೆ ಬದ್ಧರಿದ್ದೇವೆ ಎಂಬುದನ್ನು ಕೆಸಿಆರ್‌ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’ ಎಂದು ಡಿಎಂಕೆಯ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೆಸಿಆರ್‌ ಅವರು ಬಿಜೆಪಿಯ ಸೂಚನೆಯಂತೆ ಕೆಲಸ ಮಾಡುವ ಸಾಧ್ಯತೆ ಇರುವುದರಿಂದ ಅವರ ಜೊತೆ ಮಾತುಕತೆ ನಡೆಸಲು ನಮಗೆ ಆಸಕ್ತಿ ಇರಲಿಲ್ಲ. ಅವರ ಭೇಟಿಯ ಉದ್ದೇಶ ನಮಗೆ ತಿಳಿದಿತ್ತು. ಆದರೆ ರಾಜ್ಯವೊಂದರ ಮುಖ್ಯಮಂತ್ರಿ ನಮ್ಮ ನಾಯಕರ ಜೊತೆ ಮಾತುಕತೆ ನಡೆಸಲು ಇಚ್ಛಿಸಿದಾಗ ನಿರಾಕರಿಸುವುದು ಸರಿಯಲ್ಲ ಎಂದು ಭೇಟಿಗೆ ಅವಕಾಶ ನೀಡಿದ್ದೆವು’ ಎಂದು ಮತ್ತೊಬ್ಬ ಮುಖಂಡ ಹೇಳಿದ್ದಾರೆ.

ಚಂದ್ರಶೇಖರ ರಾವ್‌ ಅವರು ಸ್ಟಾಲಿನ್‌ ಅವರ ಮನೆಯ ಹೊರಗೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಜತೆಗೆ ಏನನ್ನೂ ಮಾತನಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.