ADVERTISEMENT

ವಿಧಾನಸಭೆಗಳ ವಾರ್ಷಿಕ ಕಲಾಪ 20 ದಿನ: ಒಂದೇ ದಿನ ಮಸೂದೆಗೆ ಅಂಗೀಕಾರ ಶೇ 51 ರಷ್ಟು

ಡೆಕ್ಕನ್ ಹೆರಾಲ್ಡ್
Published 16 ಮೇ 2025, 6:07 IST
Last Updated 16 ಮೇ 2025, 6:07 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ದೇಶದ ವಿವಿಧ ವಿಧಾನಸಭೆಗಳ ಕಲಾಪ ಕುರಿತಂತೆ ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರೀಸರ್ಚ್‌ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.

2024ರಲ್ಲಿ ದೇಶಾದ್ಯಂತ ಸರಾಸರಿ 20 ದಿನಗಳು ಮತ್ತು 100 ಗಂಟೆಗಳ ಕಾಲ ವಿಧಾನಸಭಾ ಕಲಾಪ ನಡೆದಿದೆ. ಈ ಅವಧಿಯಲ್ಲಿ 17 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಮಂಡಿಸಿದ ಮಸೂದೆಗಳಲ್ಲಿ ಶೇ 51 ರಷ್ಟು ಅದೇ ದಿನ ಅನುಮೋದನೆ ಪಡೆದಿವೆ ಎಂದು ಅದು ಹೇಳಿದೆ.

ADVERTISEMENT

ಒಡಿಶಾದಲ್ಲಿ 42 ದಿನಗಳ ಕಾಲ ಕಲಾಪ ನಡೆದಿದ್ದು, ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕೇರಳ (37 ದಿನಗಳು) ಮತ್ತು ಪಶ್ಚಿಮ ಬಂಗಾಳ (36 ದಿನಗಳೊಂದಿಗೆ) ಇದೆ. ಕರ್ನಾಟಕದಲ್ಲಿ 29 ದಿನಗಳ ಕಾಲ ಕಲಾಪ ನಡೆದಿದೆ.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ದೊಡ್ಡ ರಾಜ್ಯಗಳಲ್ಲಿ ತಲಾ 16 ಅಧಿವೇಶನಗಳು ನಡೆದಿವೆ. ಮಣಿಪುರ 14, ಜಮ್ಮು ಮತ್ತು ಕಾಶ್ಮೀರದಲ್ಲಿ 5, ನಾಗಾಲ್ಯಾಂಡ್‌ನಲ್ಲಿ 6 ಹಾಗೂ ಸಿಕ್ಕಿಂನಲ್ಲಿ 8 ಅಧಿವೇಶನಗಳು ನಡೆದಿವೆ. ‌‌‌

ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ಶಾಸಕಾಂಗ ಸಭೆ ಸೇರಬೇಕೆಂದು ಸಂವಿಧಾನ ಹೇಳುತ್ತದೆ. ದೇಶದ 11 ರಾಜ್ಯಗಳು ಒಂದು ಅಥವಾ ಎರಡು ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಿವೆ.

ವರದಿಯ ಪ್ರಕಾರ, 2017ರಿಂದ ಸರಾಸರಿ 30 ದಿನಗಳಿಗಿಂತ ಕಡಿಮೆ ಅವಧಿಯವರೆಗೆ ಅಧಿವೇಶನಗಳು ನಡೆಯುತ್ತಿವೆ, ಕೋವಿಡ್ -19 ಕಾರಣದಿಂದಾಗಿ 2020ರಲ್ಲಿ ಅದರ ಸಂಖ್ಯೆ 16ಕ್ಕೆ ಇಳಿದಿತ್ತು.

2018ರಲ್ಲಿ ಸರಾಸರಿ 26 ಅಧಿವೇಶನಗಳು ನಡೆದರೆ, 2019ರಲ್ಲಿ 24, 2021 ಮತ್ತು 2022ರಲ್ಲಿ ತಲಾ 21, 2023ರಲ್ಲಿ 22 ದಿನಗಳು ವಿಧಾನಸಭೆ ಕಲಾಪ ನಡೆದಿವೆ. ಕಳೆದ ವರ್ಷ(2024) ಅದರ ಸಂಖ್ಯೆ 20ಕ್ಕೆ ಕುಸಿತ ಕಂಡಿದೆ.

ಸರಾಸರಿ 100 ಗಂಟೆಗಳ ಕಾಲ ವಿಧಾನಸಭಾ ಕಲಾಪ

2024ರಲ್ಲಿ ಸರಾಸರಿ 100 ಗಂಟೆಗಳ ಕಾಲ ವಿಧಾನಸಭೆ ಕಲಾಪ ನಡೆದಿದ್ದವು. ಕೇರಳವು ಅತಿ ಹೆಚ್ಚು 228 ಗಂಟೆಗಳ ಕಾಲ ಕಲಾಪ ನಡೆಸಿ ಅಗ್ರಸ್ಥಾನದಲ್ಲಿದೆ. ನಂತರ ಒಡಿಶಾ (193 ಗಂಟೆ), ಮಹಾರಾಷ್ಟ್ರ ಮತ್ತು ರಾಜಸ್ಥಾನ (ತಲಾ 187 ಗಂಟೆ), ಗೋವಾ (172 ಗಂಟೆ), ಛತ್ತೀಸಗಢ (155 ಗಂಟೆ) ಮತ್ತು ತೆಲಂಗಾಣ (149 ಗಂಟೆ). ಕರ್ನಾಟಕದಲ್ಲಿ 145 ಗಂಟೆಗಳ ಕಾಲ ಕಲಾಪ ನಡೆಸಲಾಗಿದೆ.

ಇನ್ನೂ ಮಸೂದೆಗಳ ವಿಷಯಕ್ಕೆ ಬಂದರೆ, ಸರಾಸರಿ 17 ಮಸೂದೆಗಳನ್ನು ಅಂಗೀಕರಿಸಲಾಗಿದೆ. 2024ರಲ್ಲಿ ಅಂಗೀಕರಿಸಲಾದ 50ಕ್ಕೂ ಹೆಚ್ಚು ಮಸೂದೆಗಳಲ್ಲಿ, ಕರ್ನಾಟಕವು 49 ಮಸೂದೆಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು (45), ಹಿಮಾಚಲ ಪ್ರದೇಶ (32) ಮತ್ತು ಮಹಾರಾಷ್ಟ್ರ (32) ಇವೆ.

ದೆಹಲಿ ಕೇವಲ ಒಂದು ಮಸೂದೆಯನ್ನು ಅಂಗೀಕರಿಸಿದರೆ, ರಾಜಸ್ಥಾನ ಎರಡು ಮಸೂದೆಗಳನ್ನು ಅಂಗೀಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.