ADVERTISEMENT

ಕೋವಿಡ್‌ ಹೋರಾಟದಲ್ಲಿ ರಾಜ್ಯಕ್ಕೆ ಅಧಿಕಾರ ಕೊಡಿ: ಮುಖ್ಯಮಂತ್ರಿಗಳ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೊ ಸಂವಾದದಲ್ಲಿ ಮುಖ್ಯಮಂತ್ರಿಗಳ ಒತ್ತಾಯ

ಪಿಟಿಐ
Published 11 ಮೇ 2020, 20:15 IST
Last Updated 11 ಮೇ 2020, 20:15 IST
   

ನವದೆಹಲಿ: ಲಾಕ್‌ಡೌನ್‌ ಇನ್ನಷ್ಟು ದಿನ ವಿಸ್ತರಣೆಯಾಗಲಿ ಎಂದು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಇರಬೇಕು. ಯಾವ ಪ್ರದೇಶ ಯಾವ ವಲಯ ಎಂಬುದನ್ನು ನಿರ್ಧರಿಸುವ ಅವಕಾಶ ರಾಜ್ಯಗಳಿಗೆ ಬೇಕು ಎಂದು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ. ಕೇಂದ್ರದಿಂದ ರಾಜ್ಯಗಳಿಗೆ ಆರ್ಥಿಕ ನೆರವು ದೊರೆಯಬೇಕು ಎಂದು ಇನ್ನು ಕೆಲವರು ಕೋರಿದ್ದಾರೆ.

ಲಾಕ್‌ಡೌನ್‌ನ ಮೂರನೇ ಹಂತ ಕೊನೆಯಾಗುತ್ತಿರುವ ಹೊತ್ತಿನಲ್ಲಿ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಕೊರೊನಾ ವೈರಾಣು ಪಿಡುಗನ್ನು ತಡೆಯಲು ‘ಸಮತೋಲನದ ಕಾರ್ಯತಂತ್ರ’ ರೂಪಿಸಿ ಅದನ್ನು ಜಾರಿ ಮಾಡಬೇಕು. ಗ್ರಾಮಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು ಈಗ ದೇಶದ ಮುಂದಿರುವ ಬಹುದೊಡ್ಡ ಸವಾಲು ಎಂದು ಮೋದಿ ಅವರು ಸಂವಾದದಲ್ಲಿ ಹೇಳಿದ್ದಾರೆ.

ADVERTISEMENT

ಪ್ರಧಾನಿ ಜತೆಗಿನ ಸಂವಾದದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ಇತ್ತು. ಅವರೆಲ್ಲರೂ ಸಲಹೆ ಮತ್ತು ಬೇಡಿಕೆ
ಗಳನ್ನು ಮೋದಿಯವರ ಮುಂದೆ ಇರಿಸಿದರು.

ಕೊರೊನಾ ವೈರಾಣು ಪಸರಿಸುವಿಕೆಯ ಪ್ರಮಾಣವನ್ನು ಅನುರಿಸರಿಸಿ ವಲಯಗಳಾಗಿ (ಕೆಂಪು, ಕಿತ್ತಳೆ, ಹಸಿರು) ವಿಂಗಡಿಸುವ ಅವಕಾಶವನ್ನು ರಾಜ್ಯಗಳಿಗೇ ನೀಡಬೇಕು ಎಂದು ಕೋರಿದವರು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌. ತಮ್ಮ ರಾಜ್ಯಕ್ಕೆ ₹30 ಸಾವಿರ ಕೋಟಿ ನೆರವು ನೀಡಬೇಕು ಎಂದೂ ಕೇಂದ್ರವನ್ನು ಅವರು ಕೇಳಿಕೊಂಡರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಕೇಂದ್ರವು ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಕಂಟೈನ್‌ಮೆಂಟ್‌ ವಲಯ ಬಿಟ್ಟು ದೆಹಲಿಯ ಇತರ ಭಾಗಗಳಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಸಿಟ್ಟಾದ ಮಮತಾ

ಕೊರೊನಾ ಪಿಡುಗಿನ ವಿರುದ್ಧದ ಹೋರಾಟದ ವಿಚಾರದಲ್ಲಿ ಪಶ್ಚಿಮ ಬಂಗಾಳವನ್ನು ಅನಗತ್ಯವಾಗಿ ಟೀಕಿಸಲಾಗುತ್ತಿದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದರು. ಕೊರೊನಾ ವಿಚಾರದಲ್ಲಿ ರಾಜಕೀಯ ಸಲ್ಲದು. ಎಲ್ಲರೂ ಒಗ್ಗಟ್ಟಾಗಿ ಪಿಡುಗನ್ನು ಎದುರಿಸಬೇಕಿದೆ. ಕೋವಿಡ್‌ ನಿರ್ವಹಿಸುವುದಕ್ಕೆ ಸಂಬಂಧಿಸಿ ಕೇಂದ್ರವು ಸ್ಪಷ್ಟವಾದ ಕಾರ್ಯತಂತ್ರ ರೂಪಿಸಬೇಕು ಎಂದು ಅವರು ಸಲಹೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.