ADVERTISEMENT

ಸೂಕ್ತ ಸಮಯದಲ್ಲಿ ಜಮ್ಮು–ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುವುದು: ಅಮಿತ್ ಶಾ

ಪಿಟಿಐ
Published 18 ಅಕ್ಟೋಬರ್ 2025, 11:24 IST
Last Updated 18 ಅಕ್ಟೋಬರ್ 2025, 11:24 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

–ಪಿಟಿಐ ಚಿತ್ರ

ಪಟ್ನಾ: ‘ಜಮ್ಮು ಮತ್ತು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ. ಹಾಗೆಯೇ ಲಡಾಖ್‌ನ ಜನರು ಎತ್ತಿರುವ ಬೇಡಿಕೆಗಳಿಗೆ ಪರಿಹಾರ ಒದಗಿಸುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ರಾಜ್ಯ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಭಯೋತ್ಪಾದಕರಿಂದ ತುಂಬಿರುತ್ತಿದ್ದ ರಾಜ್ಯದ ಚಿತ್ರಣ ಇದೀಗ ಬದಲಾಗಿದೆ. ಕಳೆದ ಒಂಬತ್ತು ತಿಂಗಳಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆ ಸ್ಥಳೀಯರನ್ನು ನೇಮಕ ಮಾಡಿಕೊಂಡಿಲ್ಲ’ ಎಂದು ಹೇಳಿದ್ದಾರೆ.

‘1990ರ ದಶಕದಿಂದಲೂ ಪ್ರತ್ಯೇಕತಾವಾದ ಉಲ್ಬಣಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಸಕಾರಾತ್ಮಕ ಬದಲಾವಣೆಯಾಗಿದೆ. ಭಾರತದೊಳಗೆ ಗಡಿಯಾಚೆಯಿಂದ ಭಯೋತ್ಪಾದಕರನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಭಾವಿಸಿದ್ದ ಪಾಕಿಸ್ತಾನವು ನಮ್ಮ ಮಕ್ಕಳ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ’ ಎಂದು ಶಾ ತಿಳಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ಜನರು ತಾವು ಇಡೀ ದೇಶಕ್ಕೆ ಸೇರಿದವರು ಮತ್ತು ಇಡೀ ದೇಶವು ತಮಗೆ ಸೇರಿದ್ದು ಎಂದು ಭಾವಿಸುತ್ತಿದ್ದಾರೆ. ಇಂದು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲಾಗಿದೆ. ವಿಧಾನಸಭೆ ಚುನಾವಣೆ ಸೇರಿದಂತೆ ಪಂಚಾಯತ್, ಪುರಸಭೆ ಚುನಾವಣೆಗಳು ನಡೆದಿವೆ’ ಎಂದು ಶಾ ವಿವರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಕುರಿತು ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಹಾಗೆಯೇ ಲಡಾಖ್‌ನಲ್ಲಿನ ಇತ್ತೀಚಿನ ಪ್ರತಿಭಟನೆಗಳ ಕುರಿತು ಕೇಂದ್ರ ಸರ್ಕಾರವು ‘ಲೇಹ್ ಮತ್ತು ಕಾರ್ಗಿಲ್ ಸಮಿತಿಗಳೊಂದಿಗೆ ಮಾತುಕತೆ ನಡೆಸುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.