ADVERTISEMENT

ವಂಚನೆ: 21 ದೇಶಗಳಿಗೆ ಪತ್ರ ಬರೆಯಲು ಅನುಮತಿ

₹ 8,100 ಕೋಟಿ ಮೊತ್ತದ ಬ್ಯಾಂಕ್‌ ಹಗರಣ: ಇ.ಡಿ ತನಿಖೆ

ಪಿಟಿಐ
Published 23 ಮಾರ್ಚ್ 2019, 18:15 IST
Last Updated 23 ಮಾರ್ಚ್ 2019, 18:15 IST
   

ನವದೆಹಲಿ: ಬ್ಯಾಂಕಿಗೆ ₹8,100 ಕೋಟಿ ವಂಚಿಸಿದ ಪ್ರಕರಣದ ತನಿಖೆಗೆ ಹೆಚ್ಚಿನ ನೆರವು ಪಡೆಯಲು 21 ದೇಶಗಳಿಗೆ ಪತ್ರ ಬರೆಯಲು ದೆಹಲಿ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.

ಗುಜರಾತ್‌ನ ಸ್ಟೆರ್ಲಿಂಗ್‌ ಬಯೋಟೆಕ್‌ ಲಿಮಿಟಿಡ್‌ ಈ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ.

ಅಮೆರಿಕ, ಚೀನಾ, ಪನಾಮಾ, ಆಸ್ಟ್ರೀಯಾ, ಅಲ್ಬೇನಿಯಾ ಸೇರಿದಂತೆ 21 ದೇಶಗಳಿಂದ ಹೆಚ್ಚಿನ ಮಾಹಿತಿ ಮತ್ತು ನೆರವಿಗಾಗಿ ಮನವಿ ಪತ್ರ ಕಳುಹಿಸಲು ಅನುಮತಿ ನೀಡುವಂತೆ ಜಾರಿ ನಿರ್ದೇಶನಾಲಯ ಕೋರಿದ್ದ ಅರ್ಜಿಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸತೀಶ್‌ ಕುಮಾರ್‌ ಅರೋರಾ ಒಪ್ಪಿಗೆ ನೀಡಿದರು.

ADVERTISEMENT

ಸ್ಟೆರ್ಲಿಂಗ್‌ ಬಯೋಟೆಕ್‌ನ ಇಬ್ಬರು ನಿರ್ದೇಶಕರಾದ ನಿತೀನ್‌ ಸಂದೇಸರಾ ಮತ್ತು ಚೇತನಕುಮಾರ್‌ ಸಂದೇಸರಾ ಅಲ್ಬೇನಿಯಾದಲ್ಲಿ ಪೌರತ್ವ ಪಡೆದಿದ್ದಾರೆ. ಹೀಗಾಗಿ, ಇಬ್ಬರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಬೇನಿಯಾಗೆ ಕೋರಿಕೆ ಸಲ್ಲಿಸಲು ಸಹ ಇತ್ತೀಚೆಗೆ ನ್ಯಾಯಾಲಯ ಅವಕಾಶ ನೀಡಿತ್ತು.

ಇಂಟರ್‌ಪೋಲ್‌ ನೋಟಿಸ್‌ ಆಧಾರದ ಮೇಲೆ ಇನ್ನೊಬ್ಬ ನಿರ್ದೇಶಕ ಹಿತೇಶ್‌ ನರೇಂದ್ರ ಭಾಯ್‌ ಪಟೇಲ್‌ ಅವರನ್ನು ಅಲ್ಬೇನಿಯಾದ ತಿರಾನಾದಲ್ಲಿ ಮಾರ್ಚ್‌ 20ರಂದು ಬಂಧಿಸಲಾಗಿತ್ತು.

ಆಂಧ್ರ ಬ್ಯಾಂಕ್‌ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಕಂಪನಿ ₹5000 ಕೋಟಿ ಸಾಲ ಪಡೆದಿತ್ತು ಎಂದು ಆರೋಪಿಸಲಾಗಿದೆ. ಬಳಿಕ, ಈ ಮೊತ್ತವನ್ನು ವಸೂಲಾಗದ ಸಾಲ ಎಂದು ಪರಿಗಣಿಸಲಾಗಿತ್ತು. ಹೀಗಾಗಿ, ಒಟ್ಟಾರೆಯಾಗಿ ಕಂಪನಿ ₹8100 ಕೋಟಿ ವಂಚನೆ ಮಾಡಿದೆ ಎಂದು ದೂರಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸಿದ ಸಿಬಿಐ, ಈ ಬಗ್ಗೆ ಆರೋಪಪಟ್ಟಿ ಸಲ್ಲಿಸಿತ್ತು. ಬಳಿಕ, ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.