ADVERTISEMENT

ನೆಲದ ಕಾನೂನು ಪಾಲಿಸಲು ಟ್ವಿಟರ್‌ಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ

ಟ್ವಿಟರ್‌ ಈ ನೆಲದ ಕಾನೂನು ಪಾಲಿಸಬೇಕು ಎಂದು ತಾಕೀತು ಮಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ಏಜೆನ್ಸೀಸ್
Published 27 ಮೇ 2021, 15:21 IST
Last Updated 27 ಮೇ 2021, 15:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ದೆಹಲಿ: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಸಂಭಾವ್ಯ ಅಪಾಯ ಮತ್ತು ಪೊಲೀಸರ ಮೂಲಕ ಬೆದರಿಸುವ ತಂತ್ರದ ಕುರಿತು ಟ್ವಿಟರ್‌ ಆತಂಕ ವ್ಯಕ್ತಪಡಿಸಿ ಗುರುವಾರ ಹೇಳಿಕೆ ಬಿಡುಗಡೆ ಮಾಡಿತ್ತು. ಇದರ ಬೆನ್ನಿಗೇ, ಟ್ವಿಟರ್‌ಗೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಈ ನೆಲದ ಕಾನೂನನ್ನು ಪಾಲಿಸುವಂತೆ ತಾಕೀತು ಮಾಡಿದೆ.

ದೇಶದ ಕಾನೂನನ್ನು ಪಾಲಿಸಲು ಶ್ರಮಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದ ಟ್ವಿಟರ್‌, ಸರ್ಕಾರದ ನಿಯಮದಲ್ಲಿರುವ ಮುಕ್ತ ಸಂವಹನ ತಡೆಯುವ ಅಂಶಗಳನ್ನು ಬದಲಿಸುವಂತೆ ಕೇಳುವುದಾಗಿ ತಿಳಿಸಿತ್ತು.

ADVERTISEMENT

ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, 'ಟ್ವಿಟರ್‌ ಈ ನೆಲದ ಕಾನೂನನ್ನು ಪಾಲಿಸಬೇಕು. ಕಾನೂನು ಮತ್ತು ನೀತಿ ನಿರೂಪಣೆ ಎಂಬುದು ಇಲ್ಲಿನ ಸಾರ್ವಭೌಮತ್ವದ ಪರಮಾಧಿಕಾರ. ಟ್ವಿಟರ್‌ ಒಂದು ಸಾಮಾಜಿಕ ಮಾಧ್ಯಮವಷ್ಟೇ. ಭಾರತದ ಕಾನೂನಿನ ಚೌಕಟ್ಟು ಹೇಗಿರಬೇಕು ಎಂದು ನಿರ್ಧರಿಸುವಲ್ಲಿ ಟ್ವಿಟರ್‌ಗೆ ಯಾವುದೇ ಪಾತ್ರವಿಲ್ಲ,' ಎಂದು ಮನವರಿಕೆ ಮಾಡಿಕೊಟ್ಟಿದೆ.

ಟ್ವಿಟರ್‌ ಕಚೇರಿಗೆ ಪೊಲೀಸರು ಭೇಟಿ ನೀಡಿದ ವಿಚಾರವನ್ನು ಪ್ರಸ್ತಾಪಿಸಿ, ಭಾರತದಲ್ಲಿನ ತನ್ನ ಸಿಬ್ಬಂದಿಗಳ ಭದ್ರತೆ ಸುರಕ್ಷತೆ ಬಗ್ಗೆ ಟ್ವಿಟರ್‌ ವ್ಯಕ್ತಪಡಿಸಿದ್ದ ಆತಂಕಕ್ಕೂ ಸರ್ಕಾರ ಉತ್ತರ ನೀಡಿದೆ. ' ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳು ಭಾರತದಲ್ಲಿ ಸದಾ ಸುರಕ್ಷಿತವಾಗಿರುತ್ತಾರೆ. ಅವರ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲ ಎಂಬ ದೃಢ ಭರವಸೆ ನೀಡಲು ಬಯಸುತ್ತೇವೆ,' ಎಂದು ಸರ್ಕಾರ ತಿಳಿಸಿದೆ.

ಕೇಂದ್ರದ ವಿರುದ್ಧ ರೂಪಿಸಲಾದದ್ದು ಎನ್ನಲಾದ ಟೂಲ್‌ಕಿಟ್‌ಗೆ ಸಂಬಂಧಿಸಿದ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಟ್ವಿಟರ್‌ನ ಕಾರ್ಯನಿರ್ವಾಹಕರನ್ನು ಕೇಳಿದ್ದ ದೆಹಲಿ ಪೊಲೀಸರು, ನೋಟಿಸ್‌ ನೀಡಲು ಇತ್ತೀಚೆಗೆ ದೆಹಲಿ ಮತ್ತು ಗುರುಗ್ರಾಮದ ಟ್ವಿಟರ್‌ ಕಚೇರಿಗೆ ತೆರಳಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟ್ವಿಟರ್‌ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತನ್ನ ಸಂಸ್ಥೆಯ ಉದ್ಯೋಗಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿ ಗುರುವಾರ ಹೇಳಿಕೆ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.