ADVERTISEMENT

ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತಗೆದುಕೊಂಡ ಎನ್‌ಜಿಟಿ

ಪಿಟಿಐ
Published 14 ಜನವರಿ 2021, 10:11 IST
Last Updated 14 ಜನವರಿ 2021, 10:11 IST
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ   

ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಗಂಗಾ ನದಿಗೆ ಸೇರುತ್ತಿರುವ ಸಂಸ್ಕರಿಸದ ಕೊಳಚೆ ನೀರನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮಾಲಿನ್ಯ ಸಂಬಂಧಿತ ಅಪರಾಧಗಳನ್ನು ತಡೆಯಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಆಕ್ರೋಶ ವ್ಯಕ್ತಪಡಿಸಿದೆ.

ಈ ಪರಿಸ್ಥಿತಿ ಬಹಳ ಅತೃಪ್ತಿಕರವಾಗಿದೆ ಎಂದು ಹೇಳಿರುವ ಎನ್‌ಜಿಟಿ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯಲ್‌ ನೇತೃತ್ವದ ನ್ಯಾಯಪೀಠವು ‘ರಾಮಗಢ ವ್ಯಾಪ್ತಿಯಲ್ಲಿ ಕಲುಷಿತಗೊಡಿರುವ ಸರೋವರಗಳು ಸೇರಿದಂತೆ ಆಮಿ, ರಾಪ್ತಿ ಮತ್ತು ರೋಹನಿ ನದಿಗಳನ್ನು ಸ್ವಚ್ಛಗೊಳಿಸಲು ಆದಷ್ಟು ಬೇಗ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ’ ಸೂಚಿಸಿದೆ.

ADVERTISEMENT

ನದಿಗಳ ನಿರ್ವಹಣೆ ಕುರಿತಾಗಿ ಸಮಿತಿಯೊಂದು ವರದಿಯೊಂದನ್ನು ಸಲ್ಲಿಸಿತ್ತು. ಈ ಆಧಾರದಲ್ಲಿ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಮಂಡಳಿಯು,‘ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಟೀಕಿಸಿದೆ.

‘ಸಂಸ್ಕರಿಸದ ಕೊಳಚೆ ನೀರು, ಘನ ತ್ಯಾಜ್ಯ ನಿರ್ವಹಣೆ ಮತ್ತು ಗಂಗಾ ಪುನರುಜ್ಜೀವನ ಕಾರ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸುಪ್ರೀಂಕೋರ್ಟ್‌ ನಿರ್ದೇಶನದಂತೆರಾಜ್ಯದ ಮುಖ್ಯ ಕಾರ್ಯದರ್ಶಿ ಇದಕ್ಕೆ ಬೇಕಾಗಿರುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನ್ಯಾಯಮಂಡಳಿ ಹೇಳಿದೆ.

ಆಮಿ, ರೋಹನಿ, ಸರಯೂ ಮತ್ತು ಗಾಗ್ರಾ ನದಿಗಳ ಪುನರುಜ್ಜೀವನ ಕಾರ್ಯಗಳ ಮೇಲೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ನಿಗಾವಹಿಸಬೇಕು. ಪುನರುಜ್ಜೀವನ ಯೋಜನೆಗಳಿಗಾಗಿ ಬಜೆಟ್‌, ವೇಳಾಪಟ್ಟಿ ಮತ್ತು ಸಿಬ್ಬಂದಿಯನ್ನು ನಿಯೋಜಿಸುವ ಕಾರ್ಯಗಳನ್ನು ಅವರೇ ನೋಡಿಕೊಳ್ಳಬೇಕು ಎಂದು ನ್ಯಾಯಮಂಡಳಿ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.